ನ್ಯೂಸ್

ಮೈಕ್ರೋ ಫೈನಾನ್ಸ್ ಉಪಟಳ: ಬಿ.ವೈ.ವಿಜಯೇಂದ್ರ ಕಳವಳ | Innocent in the maelstrom of exploitation

ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ಮೈಕ್ರೋ ಫೈನಾನ್ಸ್ ಉಪಟಳಕ್ಕೆ ಬೇಸತ್ತು ಮನೆ-ಮಠ ತೊರೆಯುತ್ತಿವೆ. ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗುತ್ತಿದ್ದು, ರಾಜ್ಯ ಸರ್ಕಾರ ಕ್ರಮವಹಿಸಿ ಸಂತ್ರಸ್ತರ ನೆರವಿಗೆ ಬರುವುದು ಯಾವಾಗ ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

‘ಮನೆಹಾಳು ಮೈಕ್ರೋ ಫೈನಾನ್ಸ್’ ಶೀರ್ಷಿಕೆಯಡಿ ‘ವಿಜಯವಾಣಿ’ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿದ ವರದಿಯನ್ನು ಬಿಜೆಪಿ ನಾಯಕರಿಬ್ಬರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಹಂಚಿಕೊಂಡು, ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಇದ್ದರೂ ನಿರರ್ಥಕ

ಆರ್‌ಬಿಐ ನಿಯಮಗಳನ್ನು ಗಾಳಿಗೆ ತೂರಿ ಮೀಟರ್ ಬಡ್ಡಿ ದಂಧೆಕೋರರ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿರುವುದು ಬಯಲಾಗಿದೆ. ಮಾನ-ಪ್ರಾಣದ ರಕ್ಷಣೆ ಭಾಗ್ಯ ವಂಚಿತರ ಪಾಲಿಗೆ ಸರ್ಕಾರ ಇದ್ದರೂ ನಿರರ್ಥಕವೆಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಮರ್ಯಾದೆಗೆ ಅಂಜಿ ಗ್ರಾಮೀಣ ಪ್ರದೇಶದ ಬಡವರು ಮನೆ ತೊರೆದು ಹೋಗುತ್ತಿದ್ದಾರೆ. ಇವರ ರಕ್ಷಣೆಗೆ ಸರ್ಕಾರ ಜರೂರು ಕ್ರಮಕೈಗೊಳ್ಳಬೇಕಿದೆ. ಗುಂಡಾಗಿರಿ ಪ್ರದರ್ಶಿಸುತ್ತಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಗೃಹ ಇಲಾಖೆಗೆ ಮುಂದಾಗಬೇಕು.

ಕನಿಷ್ಠ ಆದಾಯದಿಂದ ಬದುಕುವವರನ್ನು ಆಯ್ದುಕೊಂಡು ಸಾಲ ನೀಡಿ, ಸಾಲದ ಚಕ್ರವ್ಯೆಹದಿಂದ

ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಕ್ರೋ ಫೈನಾನ್ಸ್ ದೌರ್ಜನ್ಯ ಹತ್ತಿಕ್ಕಲು ರಾಜ್ಯ ಸರ್ಕಾರ ಕ್ರಮಕೈಗೊಂಡು ಅಮಾಯಕರಿಗೆ ಅಭಯ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ತನಿಖೆಗೆ ಜಂಟಿ ಸಮಿತಿ

ಮೈಕ್ರೋ ಫೈನಾನ್ಸ್ ಸಾಲದ ಸುಳಿಯಿಂದ ಮುಗ್ಧರನ್ನು ಪಾರು ಮಾಡಲು ಗೃಹ, ಹಣಕಾಸು ಮತ್ತು ಕಾನೂನು ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಬೇಕು ಎಂದು ಆರ್.ಅಶೋಕ್ ಸಲಹೆ ನೀಡಿದ್ದಾರೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುತ್ತಿರುವ ಬಹುತೇಕರು ಬಡವರು, ದಿನಗೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು ಹಾಗೂ ಸಣ್ಣ ರೈತರೇ ಆಗಿದ್ದಾರೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ದಬ್ಬಾಳಿಕೆ ನಿಯಂತ್ರಿಸಲು, ಕೇಂದ್ರದ ಹಣಕಾಸು ಇಲಾಖೆ ಹಾಗೂ ಆರ್‌ಬಿಐನೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.