ನ್ಯೂಸ್

ಮೆಡಿಕಲ್ ಸೀಟ್ ಆಮಿಷವೊಡ್ಡಿ 40 ಲಕ್ಷ ರೂ. ಧೋಖಾ

ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಗಳು ವಿದ್ಯಾರ್ಥಿ ತಂದೆಯಿಂದ 40 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.

ಮುಂಬೈ ಮೂಲದ ರವೀಂದ್ರ ವಂಚನೆಗೆ ಒಳಗಾಗಿದ್ದು, ಅವರ ದೂರಿನ ಮೇರೆಗೆ ಆರೋಪಿಗಳಾದ ಪ್ರದೀಪ್ ರಾವಂತ್ ಮತ್ತು ಚಂದನ್ ಎಂಬುವರ ವಿರುದ್ಧ ಮಡಿವಾಳ ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ.

ರವೀಂದ್ರ, ತಮ್ಮ ಪುತ್ರನಿಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಸೀಟ್ ಕೊಡಿಸಲು ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದರು. ಅದನ್ನು ತಿಳಿದುಕೊಂಡ ಆರೋಪಿಗಳು ರವೀಂದ್ರ ಅವರ ಮೊಬೈಲ್‌ಗೆ ಕರೆ ಮಾಡಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 40 ಲಕ್ಷ ರೂ. ಶುಲ್ಕ ಪಾವತಿಸುವಂತೆ ತಿಳಿಸಿದ್ದರು. ಅದಕ್ಕೆ ಒಪ್ಪಿದ ರವೀಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಮುಂಗಡವಾಗಿ 20 ಲಕ್ಷ ರೂ. ಪಡೆದುಕೊಂಡಿದ್ದರು.

ನಂತರ ಬೆಂಗಳೂರಿಗೆ ಬರುವಂತೆ ರವೀಂದ್ರಗೆ ತಿಳಿಸಿದ್ದರು. ಅದರಂತೆ ನ.13ರಂದು ರವೀಂದ್ರ ಬಂದಾಗ ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ಹೋಟೆಲ್‌ಗೆ ಕರೆಸಿಕೊಂಡು ಬಾಕಿ ಮೊತ್ತವೆಂದು 20 ಲಕ್ಷ ರೂ. ಪಡೆದುಕೊಂಡಿದ್ದರು. ಹಣ ಕೈ ಸೇರುತ್ತಿದಂತೆ ವಂಚಕರು, ಬ್ರಿಗೇಡ್ ರಸ್ತೆಗೆ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ ಹೊರಬಂದಿದ್ದಾರೆ. ಬಹಳ ಹೊತ್ತಾದರೂ ಅವರಿಬ್ಬರೂ ವಾಪಸ್ ಬಾರದೆ ಇದ್ದಾಗ ಅನುಮಾನ ಬಂದು ರವೀಂದ್ರ, ವಂಚಕರ ಮೊಬೈಲ್‌ಗೆ ಕರೆ ಮಾಡಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಮಾಹಿತಿ ಪಡೆದು ಬಂಧನಕ್ಕೆ ಬಲೆಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.