ವಿಮ್ಸ್ ಆಸ್ಪತ್ರೆಗೆ ದೇಹ ದಾನ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ಸದಾಶಿವರೆಡ್ಡಿ ಪ್ರೌಢ ಶಾಲೆಯ ಹಿರಿಯ ಶಿಕ್ಷಕ ಗಾಳಿ ಮಹೇಶ್ (60) ಸಾವನ್ನಪ್ಪಿದ್ದು, ಅವರ ಅಪೇಕ್ಷೆಯಂತೆ ಕುಟುಂಬಸ್ಥರು ಮೃತದೇಹವನ್ನ ಮಂಗಳವಾರ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಗಾಳಿ ಮಹೇಶ್ ಅವರು ಕಳೆದ ಎರಡ್ಮೂರು ತಿಂಗಳ ಹಿಂದಷ್ಟೇ ತಮ್ಮ ಮೃತದೇಹವನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾನ ಮಾಡೋದಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದರು. ಅದನ್ನ ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಹೀಗಾಗಿ ಇಂದು ವಿಮ್ಸ್ ಆಸ್ಪತ್ರೆ ಶವಾಗಾರ ಸಿಬ್ಬಂದಿಗೆ ಮೃತದೇಹವನ್ನ ಆವರ ಪತ್ನಿ, ಮಗಳು, ಬಂಧುಗಳು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು.ವಿಮ್ಸ್ ಆಸ್ಪತ್ರೆಗೆ ದೇಹ ದಾನಮೃತ ಹಿರಿಯ ಶಿಕ್ಷಕ ಗಾಳಿ ಮಹೇಶ್ ಅವರ ತಂದೆ ಗಾಳಿ ಚನ್ನಪ್ಪ ಹಾಗೂ ತಾಯಿ ಗಾಳಿ ಪಾರ್ವತಮ್ಮ ಅವರು ಕೂಡ ಇದೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದೇಹ ದಾನ ಮಾಡಿ ಮತ್ತೊಬ್ಬರಿಗೆ ಸ್ಫೂರ್ತಿಯಾಗಿದ್ದರು. ಹೀಗಾಗಿ, ಅವರ ಮಗನಾದ ಗಾಳಿ ಮಹೇಶ ಅವರು ಕೂಡ ಅದೇ ಹಾದಿ ಹಿಡಿಯೋ ಮುಖೇನ ಮಾದರಿಯಾಗಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಮೃತ ಶಿಕ್ಷಕನ ಪುತ್ರಿ ಆಶಾ, ನಮ್ಮ ತಂದೆಯವರು ಮೃತದೇಹವನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾನ ಮಾಡುವ ಅಪೇಕ್ಷೆ ಹೊಂದಿದ್ದರು. ದೇಹ ದಾನ ಮಾಡೋದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದೇ ಈ ಕಾರ್ಯಕ್ಕೆ ಮುಂದಾಗಿರೋದು ನಮಗೆಲ್ಲಾ ಸ್ಫೂರ್ತಿದಾಯಕವಾಗಿದೆ. ನಾನೂ ಕೂಡ ನನ್ನ ಮೃತದೇಹವನ್ನ ದಾನ ಮಾಡೋ ನಿರ್ಧಾರಕ್ಕೆ ಬಂದಿರುವೆ ಎಂದು ತಿಳಿಸಿದರು.ಮೃತ ಮಹೇಶ್ ಸ್ನೇಹಿತ ವೆಂಕಟೇಶ್ ಮಾತನಾಡಿ, ನನ್ನ ಸ್ನೇಹಿತನಾಗಿದ್ದ ಮಹೇಶ್ ಅವರು ತಮ್ಮ ಮೃತದೇಹ ದಾನ ಮಾಡೋ ವಿಚಾರವನ್ನ ನನ್ನೊಂದಿಗೆ ಹಂಚಿಕೊಂಡಿದ್ದರು. ನನ್ನನ್ನೂ ಕೂಡ ಅದಕ್ಕೆ ಪ್ರೇರೇಪಿಸಿದ್ದರು. ಇಬ್ಬರೂ ಕೂಡ ಮೃತದೇಹ ದಾನ ಮಾಡೋದರ ಕುರಿತು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿದ್ದೇವೆ. ಆದರೆ ನನಗಿಂತಲೂ ಮೊದಲೇ ನನ್ನನ್ನ ಬಿಟ್ಟು ನನ್ನ ಸ್ನೇಹಿತ ಹೋಗಿ ಬಿಟ್ಟ ಎಂದು ಭಾವುಕರಾದ್ರು.ಮಹೇಶ್ ಸಹೋದ್ಯೋಗಿ ಶಿಕ್ಷಕ ನಾಗನಗೌಡ ಮಾತನಾಡಿ, ದೇಶನೂರು ಸದಾಶಿವರೆಡ್ಡಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಳಿ ಮಹೇಶ ಅವರು ಅತ್ಯುತ್ತಮ ಬಾಂಧವ್ಯವನ್ನ ಹೊಂದಿದ್ದರು ಎಂದು ಅಂದಿನ ದಿನಗಳನ್ನು ನೆನೆದರು. ಒಟ್ಟಾರೆ ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಗುರುವಿನ ಕಾರ್ಯ ನಿಜಕ್ಕೂ ಶ್ಲಾಘನೀಯ.