ನ್ಯೂಸ್

ಮೂವರು ದ್ವಿಚಕ್ರ ವಾಹನ ಕಳ್ಳರ ಸೆರೆ, ೧೮ ದ್ವಿಚಕ್ರ ವಾಹನಗಳು ಜಪ್ತಿ

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಹದೇವಪುರ ಹಾಗೂ ಕೊಡಿಗೇಹಳ್ಳಿ ಠಾಣೆ ಪೊಲೀಸರು ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಒಟ್ಟು ೧೨ ಲಕ್ಷ ರೂ. ಬೆಲೆಬಾಳುವ ೧೮ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ ಕಿರಣ್(೨೧)ನನ್ನು ಬಂಧಿಸಿರುವ ಮಹದೇವಪುರ ಠಾಣೆ ಪೊಲೀಸರು ೮ ಲಕ್ಷ ರೂ. ಮೌಲ್ಯದ ೧೧ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಯು ಎಚ್‌ಪಿ ಕಂಪನಿಯ ಉದ್ಯೊಗಿಯೊಬ್ಬರು ಮೇ.೨೩ ರಂದು ಸಂಸ್ಥೆಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಕಚೇರಿಗೆ ಹೋಗಿದ್ದು, ವಾಪಸ್ ಬರುವಷ್ಟರಲ್ಲಿ ದ್ವಿಚಕ್ರ ವಾಹನ ಕಳವು ಆಗಿತ್ತು. ಈ ಬಗ್ಗೆ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ದ್ವಿಚಕ್ರ ವಾಹನ ಸಮೇತ ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ಒಟ್ಟು ೯ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ೨ ದ್ವಿಚಕ್ರ ವಾಹನಗಳ ಮಾಲಿಕರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೩.೯೨ ಲಕ್ಷ ಮೌಲ್ಯದ ೭ ದ್ವಿಚಕ್ರ ವಾಹನ ಜಪ್ತಿ:

ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿ ೩.೯೨ ಲಕ್ಷ ರೂ. ಮೌಲ್ಯದ ೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್.ಟಿ ನಗರದ ಸಲ್ಮಾನ್ ಪಾಷಾ(೨೨) ಮತ್ತು ಡಿ.ಜೆ.ಹಳ್ಳಿಯ ಅಸ್ಲಾಂ ಪಾಷ(೨೩) ಬಂಧಿತರು.

ಅ.೮ ರಂದು ಸಾಯಿಬಾಬಾ ದೇವಸ್ಥಾನದ ಮುಂಭಾಗ ಪೂಜಾ ಸ್ಟೋರ್ ಪಕ್ಕದಲ್ಲಿರುವ ರಸ್ತೆಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ತಮ ದ್ವಿಚಕ್ರ ವಾಹನ ನಿಲ್ಲಿಸಿ ಕೀಯನ್ನು ವಾಹನದಲ್ಲೆ ಬಿಟ್ಟು ಅಂಗಡಿಗೆ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಕಲೆ ಹಾಕಿ ಹೆಬ್ಬಾಳ ಜಂಕ್ಷನ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಒಟ್ಟು ೬ ದ್ವಿಚಕ್ರ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.