ಭಾರತೀಯ ಸಂಗೀತ ಶಾಸ್ತ್ರ ದಿನಾಚರಣೆ ಅಂಗವಾಗಿ ಬ್ರಹ್ಮವಿದ್ಯಾ ಸಂಸ್ಥೆ ಮತ್ತು ಡಿವಿಜಿ ಬಳಗ ಪ್ರತಿಷ್ಠಾನ ವತಿಯಿಂದ ಆಗಸ್ಟ್ 11 ರಿಂದ 13ರವರೆಗೆ ಮೂರು ದಿನಗಳ ಕಲಾ ಉತ್ಸವ ಆಯೋಜಿಸಲಾಗಿದೆ. ಈ ವರ್ಷದ ಕಾರ್ಯಕ್ರಮವನ್ನು ಕರ್ನಾಟಕದ ಯುವ ಸಂಗೀತಕಲಾವಿದರಿಗೆ ಮೀಸಲಿಡಲಾಗಿದೆ.
ನಗರದ ಜೆಎಲ್‌ಬಿ ರಸ್ತೆಯ ಶ್ರೀವಾಸುದೇವಾಚಾರ್ಯ ಭವನದಲ್ಲಿ ಪ್ರತಿದಿನ ಸಂಜೆ 5.30 ರಿಂದ ಪ್ರಾರಂಭವಾಗಲಿದೆ. ಪದ್ಮಶ್ರೀ ಪುರಸ್ಕೃತರಾದ, ಮಹಾಮಹೋಪಾಧ್ಯಾಯ ಡಾ.ರಾ.ಸತ್ಯನಾರಾಯಣ ಅವರಿಂದ ಸ್ಥಾಪಿತವಾದ ಬ್ರಹ್ಮವಿದ್ಯಾ ಸಂಸ್ಥೆಯು, ಭಾರತೀಯ ಸಂಸ್ಕೃತಿ ಮತ್ತು ಶಾಸ್ತ್ರಗಳ ಅಧ್ಯಯನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಆ. 11 ರಂದು ತೇಜಸ್ ಬಾಡಾಲ ಅವರಿಂದ ಕನ್ನಡ ಕಾವ್ಯ ವಾಚನ, ಡಾ.ಪ್ರಸನ್ನ ವೆಂಕಟೇಶ್ ಅವರಿಂದ ಆರೋಗ್ಯ ದಿನಚರಿ ಕುರಿತು ಉಪನ್ಯಾಸ, ಕರ್ನಾಟಕದ ಪ್ರಸಿದ್ಧ ಯುವ ಗಾಯಕ, ಹರ್ಷಧ್ವನಿ ಖ್ಯಾತಿಯ ವಿದ್ವಾನ್ ಎಂ.ಆರ್.ಶ್ರೀಹರ್ಷ ಅವರಿಂದ ‘ನಂದಗಾನ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮ, ವಿದ್ವಾನ್ ಕೌಸ್ತುಭ್ ಎಂ.ಎಸ್. ಮತ್ತು ಯುವತಂಡದಿಂದ ‘ವಚನಪದವೈದ್ಯ’ ಎಂಬ ಸಂಗೀತ ಮತ್ತು ವೈದ್ಯಕೀಯ ರೂಪಕ ಕಾರ್ಯಕ್ರಮ ನಡೆಯಲಿದೆ.
12 ರಂದು ಶ್ರೀಹರ್ಷ ಅವರಿಂದ ಡಿ.ವಿ.ಜಿ. ವಿರಚಿತ ಸಂಗೀತನಾಟ್ಯ ವಿಷಯದ ಕಾವ್ಯ ವಾಚನ, ಡಾ.ಶ್ರೀವತ್ಸ ಅವರಿಂದ ಆರೋಗ್ಯ ದಿನಚರಿ ಕುರಿತು ಉಪನ್ಯಾಸ, ವಿದ್ವಾನ್ ಎಸ್.ಎನ್. ಸುಮುಖ ಶ್ರೀವತ್ಸ ಅವರಿಂದ ಕರ್ನಾಟಕ ಸಂಗೀತ ಕಛೇರಿ, ಶ್ರೀಕಾಂತಂ ಸಹೋದರಿಯರಿಂದ ಯುಗಳ ಗಾಯನ, ವಿದ್ವಾನ್ ಎಚ್.ಎಲ್. ಶಿವಶಂಕರಸ್ವಾಮಿ ಮತ್ತು ತಂಡದಿಂದ ‘ಲಯಲಹರಿ’ ಕಾರ್ಯಕ್ರಮ ನಡೆಯಲಿದೆ. 13 ರಂದು ಸಂಗೀತ ಹಾಗೂ ಶಾಸ್ತ್ರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.