ಬಂಡೂರುಕುರಿಗಳನ್ನು ಸಾಕಾಣಿಕೆ ಮಾಡಿರುವ ಕುಮಾರಸ್ವಾಮಿ. 
ನ್ಯೂಸ್

ಮೂರು ಎಕರೆ ಜಮೀನಿನಲ್ಲಿ ವಿವಿಧ ಬೆಳೆ

ನಂಜನಗೂಡು: ಓದಿನಲ್ಲಿ ಹಿಂದೆ ಉಳಿದ ತಾಲೂಕಿನ ಮುದ್ದಹಳ್ಳಿ ಗ್ರಾಮದ ದಂಪತಿ ಭೂಮಿಯನ್ನೇ ನಂಬಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಬಂಗಾರದ ಬೆಳೆ ತೆಗೆದು ವಾರ್ಷಿಕ ಲಕ್ಷಾಂತರ ರೂ. ಲಾಭ ಗಳಿಸುವ ಮೂಲಕ ಮಾದರಿ ಕೃಷಿ ಕುಟುಂಬವಾಗಿ ಗಮನ ಸೆಳೆದಿದ್ದಾರೆ.

ಮುದ್ದಹಳ್ಳಿ ಗ್ರಾಮದ ಕುಮಾರಸ್ವಾಮಿ ಹಾಗೂ ಲತಾ ದಂಪತಿ ಕೃಷಿಯನ್ನೇ ನಂಬಿ ಸಂತಸದಾಯಕ ಜೀವನ ಕಂಡುಕೊಂಡಿದ್ದಾರೆ. ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಹೇಗೆಲ್ಲಾ ಲಾಭ ಗಳಿಸಬಹುದು ಎಂಬುದನ್ನು ಇತರ ರೈತರಿಗೂ ಮಾರ್ಗದರ್ಶನ ಮಾಡುವ ಮೂಲಕ ಮಾದರಿ ಜೀವನ ನಡೆಸುತ್ತಿದ್ದಾರೆ.
ಕೃಷಿಕ ಕುಟುಂಬದಲ್ಲೇ ಹುಟ್ಟಿರುವ ಕುಮಾರಸ್ವಾಮಿ ಓದಿರುವುದು ಕೇವಲ 6ನೇ ತರಗತಿ. ಇವರ ಪತ್ನಿ ಲತಾ 9ನೇ ತರಗತಿ ಮಾತ್ರ ವ್ಯಾಸಂಗ ಮಾಡಿದ್ದಾರೆ. ಆದರೆ ಈ ಇಬ್ಬರು ತಮಗಿರುವ ಮೂರು ಎಕರೆ ಕೃಷಿ ಭೂಮಿಯಲ್ಲೇ ಮನೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಕೃಷಿ ಜೀವನ ಸಾಗಿಸುತ್ತಿದ್ದಾರೆ.

ತಮಗಿರುವ ಮೂರು ಎಕರೆ ಭೂಮಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ತೆಂಗಿನ ತೋಟ ಹಾಗೂ ಸಪೋಟ ಗಿಡಗಳನ್ನು ಬೆಳೆಸಿದ್ದಾರೆ. ಮತ್ತೊಂದು ಎಕರೆ ಜಾಗದಲ್ಲಿ ರೇಷ್ಮೆ ಸಾಕಣೆಗಾಗಿ ಕಡ್ಡಿ ಸೊಪ್ಪಿನ ಗಿಡಗಳನ್ನು ಹಾಕಿದ್ದಾರೆ. ಅರ್ಧ ಎಕರೆ ಪ್ರದೇಶದಲ್ಲಿ ನೇರಳೆ, ಇನ್ನೊಂದು ಅರ್ಧ ಎಕರೆಯಲ್ಲಿ ಮಾವಿನ ಗಿಡಗಳನ್ನು ಬೆಳೆದಿದ್ದಾರೆ. ಜತೆಗೆ ಟೊಮ್ಯಾಟೊ, ಮೆಣಸು, ಬದನೆ, ಪಪ್ಪಾಯಿ ಸೇರಿದಂತೆ ಹಲವು ಜಾತಿಯ ಸಸಿಗಳನ್ನು ಬೆಳೆಯುವ ನರ್ಸರಿಯನ್ನು ಮಾಡಿಕೊಂಡು ರೈತರಿಗೆ ಸಸಿಗಳ ಮಾರಾಟವನ್ನೂ ಮಾಡುತ್ತಿದ್ದಾರೆ.

ಕುರಿ ಸಾಕಣೆ: 30 ಬಂಡೂರು ಕುರಿಗಳನ್ನು ಸಾಕಣೆ ಮಾಡಿಕೊಂಡು ವರ್ಷಕ್ಕೆ ಹತ್ತಾರು ಕುರಿಗಳನ್ನು ಮಾರಾಟ ಮಾಡಿ ಲಾಭ ಕಾಣುತ್ತಿದ್ದಾರೆ. ಜತೆಗೆ ಮೂರು ಹೈಬ್ರಿಡ್ ಹಸು, ತಲಾ ಒಂದು ಹಳ್ಳಿಕಾರ್ ಹಾಗೂ ನಾಡ ಹಸು ಸಾಕಿಕೊಂಡು ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ಹಾಗೆಯೇ ಕೃಷಿ ಹೊಂಡ ಮಾಡಿಕೊಂಡು ಹೊಂಡದಲ್ಲಿ ಮೀನು ಸಾಕಣೆ ಮಾಡಿ ಅದರಲ್ಲೂ ಲಾಭ ತೆಗೆಯುತ್ತಿದ್ದಾರೆ. ಹೀಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವರ್ಷದಲ್ಲಿ ಎಲ್ಲ ದಿನವೂ ಒಂದಿಲ್ಲೊಂದು ವಿಧದಲ್ಲಿ ಲಾಭ ಕಾಣುತ್ತಿರುವ ಇವರು ತಿಂಗಳಿಗೆ 50 ರಿಂದ 70 ಸಾವಿರ ರೂ.ಗೂ ಹೆಚ್ಚು ಲಾಭವನ್ನು ಕಾಣುತ್ತಿದ್ದಾರೆ. ವಾರ್ಷಿಕ 6 ರಿಂದ 8 ಲಕ್ಷ ರೂ.ವರೆಗೆ ಸಂಪಾದಿಸಿ ಕೃಷಿಯಲ್ಲೂ ಬಂಗಾರದ ಬೆಳೆ ತೆಗೆಯಬಹುದು ಎಂಬುದು ನಿರೂಪಿಸಿದ್ದಾರೆ.

ಸಮಗ್ರ ಕೃಷಿಗೆ ಬಗ್ಗೆ ಅರಿವು: ರೈತರು ತಮಗಿರುವ ಭೂಮಿಯಲ್ಲಿ ಏಕ ಬೆಳೆಯನ್ನೇ ನಂಬಿಕೊಂಡು ವರ್ಷಕ್ಕೆ ಎರಡು ಫಸಲು ಕಾಣುತ್ತಿರುವುದರಿಂದ ರೈತರು ಕೃಷಿಯಲ್ಲಿ ಲಾಭ ಕಾಣಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಲಾಭ ಕಂಡುಕೊಂಡು ಜೀವನ ಭದ್ರಗೊಳಿಸಿಕೊಳ್ಳಲು ಸಾಧ್ಯ ಎಂಬ ಬಗ್ಗೆ ಕುಮಾರಸ್ವಾಮಿ ರೈತರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ರೈತ ಮನಸ್ಸು ಮಾಡಿದರೆ ಒಂದು ಎಕರೆ ಭೂಮಿಯಲ್ಲಿ ಲಾಭ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ಮಾಡಬಹುದು ಎಂಬ ಅಚಲ ವಿಶ್ವಾಸವನ್ನು ಹೊಂದಿರುವ ಕುಮಾರಸ್ವಾಮಿ, ರೈತರು ವರ್ಷವಿಡೀ ಕೃಷಿಯಲ್ಲಿ ಲಾಭ ಗಳಿಸುವ ಬಗ್ಗೆ ತಿಳಿವಳಿಕೆ ನೀಡುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ. ಕುತೂಹಲಕ್ಕೆ ಅವರ ಜಮೀನಿಗೆ ಭೇಟಿ ನೀಡಿರುವ ರೈತರಿಗೆ ಸಮಗ್ರ ಕೃಷಿ ಪದ್ಧತಿಯನ್ನು ಹೇಗೆಲ್ಲಾ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ರೇಷ್ಮೆ ಬೆಳೆಗೆ ಒತ್ತು: ಪ್ರಸ್ತುತ ರೇಷ್ಮೆ ಬೆಳೆಯಿಂದ ರೈತರು ವಿಮುಖರಾಗುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಲಾಭವನ್ನೂ ಹೇಗೆಲ್ಲಾ ಗಳಿಸಬಹುದು ಎಂಬುದಕ್ಕೆ ಕುಮಾರಸ್ವಾಮಿ ನಿದರ್ಶನವಾಗಿದ್ದಾರೆ. ನೂರು ಮೊಟ್ಟೆ ಗೂಡು ಸಾಕಿ ಮರಿ ಮಾಡುವ ಮೂಲಕ ತಿಂಗಳಿಗೆ ಗರಿಷ್ಠ 80 ಕೆ.ಜಿ. ರೇಷ್ಮೆಗೂಡು ಉತ್ಪಾದಿಸುತ್ತಿದ್ದು, ವರ್ಷದಲ್ಲಿ 10 ಬೆಳೆ ತೆಗೆಯುತ್ತಿದ್ದಾರೆ. ಇದಕ್ಕಾಗಿ ಒಂದು ಎಕರೆಯಲ್ಲಿ ರೇಷ್ಮೆ ಹುಳು ಮೇವಿಗಾಗಿ ಹಿಪ್ಪು ನೇರಳೆ ಹಾಗೂ 10 ಗುಂಟೆ ಪ್ರದೇಶದಲ್ಲಿ ಮೇವಿನ ಬೆಳೆ ಬೆಳೆದಿದ್ದಾರೆ.


ತಮ್ಮ ಭೂಮಿಗೆ ಅವಶ್ಯಕವಾದ ಪ್ರಮಾಣದಲ್ಲಿ ಎರೆಹುಳು ಗೊಬ್ಬರವನ್ನೂ ಉತ್ಪಾದಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ತಮ್ಮ ಜಮೀನಿನಲ್ಲಿ ಮೆಂತ್ಯ, ಕೊತ್ತಂಬರಿ, ದಂಟು ಹೀಗೆ ಬಗೆಬಗೆಯ ಸೊಪ್ಪುಗಳನ್ನು ಬೆಳೆದು ಮಾರಾಟ ಮಾಡುವ ಮೂಲಕ ನಿಶ್ಚಿತ ಆದಾಯದ ದಾರಿ ಕಂಡುಕೊಂಡಿದ್ದಾರೆ. ಜತೆಗೆ ತಮ್ಮ ತೋಟದಲ್ಲಿ ಜೇನು ಸಾಕಣೆಯನ್ನೂ ಮಾಡಿದ್ದು 5 ಪೆಟ್ಟಿಗೆಗಳಿಂದ ಮಾಸಿಕ ಕನಿಷ್ಠ 3 ಲೀಟರ್ ಜೇನುತುಪ್ಪ ತೆಗೆಯುತ್ತಿದ್ದಾರೆ.

ಹಲವೆಡೆ ಗೌರವ: ಪ್ರಗತಿಪರ ರೈತರಾಗಿರುವ ಕುಮಾರಸ್ವಾಮಿ ಹಲವು ಗೌರವ, ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಕಳೆದ ವರ್ಷ ಮೈಸೂರು ತಾಲೂಕಿನ ತಳೂರು ಗ್ರಾಮದಲ್ಲಿ ನಡೆದಿದ್ದ ಕೃಷಿ ಕ್ಷೇತ್ರೋತ್ಸವದಲ್ಲಿ ಕೃಷಿ ಸಚಿವರಿಂದ ಸನ್ಮಾನಕ್ಕೆ ಭಾಜನರಾಗಿದ್ದರು. ನಾಗನಹಳ್ಳಿಯ ಕೃಷಿ ಕೇಂದ್ರದಿಂದಲೂ ಇವರನ್ನು ಗೌರವಿಸಲಾಗಿದೆ. ಇವರ ರೇಷ್ಮೆ ಸಾಕಣೆ ಕಂಡು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಸನ್ಮಾನಿಸಿದೆ. ಮೈಸೂರು ಆಕಾಶವಾಣಿಯಲ್ಲೂ ಇವರ ಸಮಗ್ರ ಬೇಸಾಯ ಪದ್ಧತಿ ಬಗ್ಗೆ ಕಾರ್ಯಕ್ರಮ ಬಿತ್ತರಗೊಂಡಿದೆ. ಅಲ್ಲದೇ ಎಲ್ಲೇ ಕೃಷಿ ವಿಚಾರಸಂಕಿರಣ ನಡೆದರೂ ರೈತರಿಗೆ ಸಮಗ್ರ ಕೃಷಿ ಬಗ್ಗೆ ಇವರ ಅನುಭವವನ್ನು ಪರಿಚಯಿಸಿ ಕೊಡಲಾಗುತ್ತಿದೆ.

ನಮ್ಮದು ಕೃಷಿ ಕುಟುಂಬ. ಪಿತ್ರಾರ್ಜಿತವಾಗಿ ಬಂದ ಮೂರು ಎಕರೆ ಕೃಷಿ ಭೂಮಿಯಲ್ಲಿ ಉತ್ತಮ ಫಸಲು ತೆಗೆಯಬೇಕೆಂಬ ಉದ್ದೇಶದಿಂದ ಬೋರ್ ಹಾಕಿಸಲು ಯತ್ನಿಸಿದೆ. ನಾಲ್ಕು ಬಾರಿ ಬೋರ್ ತೆಗೆಸಿದರೂ ನೀರು ಬರಲಿಲ್ಲ. 5ನೇ ಪ್ರಯತ್ನದಲ್ಲಿ ಬೋರ್‌ನಲ್ಲಿ ನೀರು ಬಂತು. ಕಳೆದ 9 ವರ್ಷಗಳಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಜಮೀನಿನಲ್ಲೇ ಮನೆ ಮಾಡಿಕೊಂಡು ವರ್ಷಪೂರ್ತಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂ. ಸಂಪಾದನೆ ಮಾಡಿ ನೆಮ್ಮದಿದಾಯಕ ಜೀವನ ಕಂಡುಕೊಂಡಿದ್ದೇನೆ. ಅಷ್ಟಾಗಿ ಓದದ ನಾನು ನನ್ನ ಪತ್ನಿ ಭೂಮಿಯನ್ನೇ ನಂಬಿ ಜೀವನ ಕಂಡುಕೊಳ್ಳಲು ಮುಂದಾದೆವು. ಈಗ ಕೃಷಿ ನಮಗೆ ಬದುಕು ಕಟ್ಟಿಕೊಟ್ಟಿದೆ.
ಕುಮಾರಸ್ವಾಮಿ, ಪ್ರಗತಿಪರ ರೈತ, ಮುದ್ದಹಳ್ಳಿ ಗ್ರಾಮ.