ಸೊರಬ ಆನವಟ್ಟಿ ಹೋಬಳಿಯ ಮೂಡಿ ಏತ ನೀರಾವರಿ ಯೋಜನೆಯನ್ನು ಸಚಿವ ಮಧು ಬಂಗಾರಪ್ಪ ಪರಿಶೀಲಿಸಿದರು. ವೆಂಕಟೇಶ್, ಸಿ.ಪಿ.ಸತೀಶ್, ಸದಾನಂದ ಗೌಡ ಬಿಳಗಲಿ, ಶಿವಲಿಂಗೇ ಗೌಡ, ವೀರೇಶ್ ಕೊಟಗಿ ಇತರರಿದ್ದರು. 
ನ್ಯೂಸ್

ಮೂಡಿ ಏತನೀರಾವರಿ ಯೋಜನೆ ಕೆರೆಗಳಿಗೆ ನೀರು ಹಾಯಿಸಿ

ಸೊರಬ: ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು ಕೂಡಲೇ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮೂಡಿ ಏತನೀರಾವರಿ ಯೋಜನೆಗೆ ಒಳಪಡುವ ಕೆರೆಗಳಿಗೆ ನೀರು ಹಾಯಿಸುವಂತೆ ಸಚಿವ ಮಧು ಬಂಗಾರಪ್ಪ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಬುಧವಾರ ತಾಲೂಕಿನ ಮೂಡಿ ಏತನೀರಾವರಿ ಯೋಜನೆ ಸ್ಥಳಕ್ಕೆೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕೋಟ್ಯಂತರ ರೂ. ವೆಚ್ಚವನ್ನು ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಮೂಡಿ ಏತ ನೀರಾವರಿ ಯೋಜನೆಯ ಮುಖ್ಯ ಉದ್ದೇಶ ಕೆರೆಗಳಿಗೆ ನೀರು ಹಾಯಿಸುವುದಾಗಿದೆ. ಇದರಿಂದ ರೈತರಿಗೆ ಉಪಯೋಗವಾಗಬೇಕು ಎಂದರು.
ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುವಂತೆ ಸಂಬಂಧ ಪಟ್ಟ ಇಂಜಿನಿಯರ್‌ಗಳು ನೋಡಿಕೊಳ್ಳಬೇಕು. 71 ಕೆರೆಗಳಲ್ಲಿ 53 ಕೆರೆಗಳಿಗೆ ಮಾತ್ರ ನೀರು ಹಾಯಿಸಲಾಗುತ್ತಿದೆ. ನಿಗದಿತ ವಿದ್ಯುತ್ ವೋಲ್ಟೆಜ್ ಬಾರದೆ ಇರುವುದರಿಂದ ಇನ್ನೂ 18 ಕೆರೆಗಳಿಗೆ ನೀರನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಈಗಾಗಲೇ ರೈತರಿಂದ ನೀರು ಬರುತ್ತ್ತಿಲ್ಲ ಎಂಬ ದೂರು ಬಂದಿದೆ. ಕೂಡಲೆ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ನೀರಾವರಿ ಅಧೀಕ್ಷಕ ಅಭಿಯಂತರ ಕೆ.ಪ್ರಶಾಂತ್ ಅವರಿಗೆ ತಿಳಿಸಿದರು.
ಆನವಟ್ಟಿಯಲ್ಲಿ ನಡೆಯುತ್ತಿರುವ ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿ ಪರಿಶೀಲಿಸಿ ನಿಲ್ದಾಣದ ಕಾಂಕ್ರೀಟ್ ಪ್ಲಾಟ್‌ಫಾರಂಗೆ ಹಾಗೂ ಬಸ್‌ನಿಲ್ದಾಣದ ಕಾಂಪೌಂಡ್ ಕಾಮಗಾರಿಗೆ ಸುಮಾರು 2.5 ಕೋಟಿ ರೂ. ಅನುದಾನ ಬೇಕಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದರು. ಸಚಿವ ಮಧು ಬಂಗಾರಪ್ಪ ಸ್ಥಳದಲ್ಲೆ ಸಾರಿಗೆ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಾಮಗಾರಿಯ ಬಗ್ಗೆ ವಿವರಿಸಿ ಅನುದಾನ ನೀಡುವಂತೆ ಮನವಿ ಮಾಡಿದರು.
ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು ಉಳವಿ ಮತ್ತು ಮಾಲಿಗೆ ಗ್ರಾಮಕ್ಕೆ ಹೆಚ್ಚುವರಿ ಪರಿವರ್ತಕ, ಕುಪ್ಪಗಡ್ಡೆ ಹಾಗೂ ಕಾಗೋಡು ವಿದ್ಯುತ್ ಗ್ರೀಡ್ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು. ತಾಲೂಕಿಗೆ ಇನ್ನೂ ಹೆಚ್ಚಿನ ಗ್ರೀಡ್‌ಗಳ ಅವಶ್ಯಕತೆಯಿದ್ದು ಮೂಡಿ ಮತ್ತು ಇಂಡವಳ್ಳಿಯಲ್ಲಿ ಹೊಸದಾಗಿ ಗ್ರೀಡ್ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಮಾಹಿತಿ ಹಾಗೂ ವರದಿ ನೀಡುವಂತೆ ಮೆಸ್ಕಾಂ ಇಂಜಿನಿಯರ್‌ಗಳಿಗೆ ತಿಳಿಸಿದರು.
ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಪಿ.ಸತೀಶ್, ಸಾಗರ ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಶಿಕಾರಿಪುರ ಕಾರ್ಯಪಾಲಕ ಅಭಿಯಂತರ ಇಂದೂಧರ, ಸೊರಬ ಸಹಾಯಕ ಕಾರ್ಯಪಾಲಕ ಅಭಿಯಂತರ ಸತ್ಯಪ್ರಕಾಶ, ಆನವಟ್ಟಿ ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮಾಜಿ ಜಿಪಂ ಸದಸ್ಯರಾದ ಶಿವಲಿಂಗೇ ಗೌಡ, ವೀರೇಶ್ ಕೊಟಗಿ, ತಾಪಂ ಮಾಜಿ ಅಧ್ಯಕ್ಷ ಜೈಶೀಲಪ್ಪ, ಮಾಜಿ ಸದಸ್ಯ ನರೇಂದ್ರ ಒಡೆಯರ್, ಕೆ.ಪಿ.ರುದ್ರಗೌಡ, ಸಂಜೀವ್ ಇತರರಿದ್ದರು.