ನ್ಯೂಸ್

ಮೂಗೂರಿನಲ್ಲಿ ಅದ್ದೂರಿ ರಥೋತ್ಸವ

ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಶಾಸಕ ಎಂ.ಅಶ್ವಿನ್ ಕುಮಾರ್ ಹಾಗೂ ವಾಟಾಳು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಸಿ.ಜೆ.ಗೀತಾ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಸಕಾಲದಲ್ಲಿ ಮಳೆ, ಬೆಳೆಯಾಗಿ ರೈತರು ಸಂತೃಷ್ಟಿಗೊಂಡು ನಾಡಿನ ಜನತೆ ಸುಖ ಶಾಂತಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.ರಥೋತ್ಸವದ ಅಂಗವಾಗಿ ದೇಗುಲದಲ್ಲಿ ಸಾಂಪ್ರದಾಯಿಕವಾಗಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಮಧ್ಯಾಹ್ನ 3ಗಂಟೆಗೆ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿದ ನಂತರ ಉತ್ಸವವು ರಥದ ಬೀದಿಯಲ್ಲಿ ಸಾಗಲು ಸಜ್ಜಾಯಿತು.ರಥ ಮಂಟಪದಲ್ಲಿ ಅಮ್ಮನವರನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ತರಲಾಯಿತು. ನೆರೆದಿದ್ದ ಭಕ್ತ ಸಮೂಹ ತಿಬ್ಬಾದೇವಿಗೆ ಜೈ ಎಂದು ಜಯಘೋಷಣೆ ಕೂಗುತ್ತಾ ರಥ ಎಳೆದು ಧನ್ಯತೆ ಮೆರೆದರು.

ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವಿಯ ದರ್ಶನ ಪಡೆದರು.ಪ್ರತಿ ವರ್ಷದಂತೆ ಈ ಬಾರಿಯೂ ಮೂಗೂರು ಗೆಳೆಯರ ಬಳಗದಿಂದ ನೂತನ ರಥಕ್ಕೆ ಬೃಹತ್ ಗಾತ್ರದ ಹೂವಿನ ಹಾರ ಅರ್ಪಿಸಲಾಯಿತು.ಸ್ಥಳದಲ್ಲಿದ್ದ ಮುತ್ತೈದೆ, ದಂಪತಿಗಳು, ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಲೆಂದು ಪ್ರಾರ್ಥಿಸಿ ಹಣ್ಣು-ಧವನ ಅರ್ಪಿಸಿದರು. ಹರಕೆ ಹೊತ್ತ ಭಕ್ತರು ಅಲ್ಲಲ್ಲಿ ಪ್ರಸಾದ ವಿನಿಯೋಗ ಮಾಡಿದರು.ಉಪ ತಹಸೀಲ್ದಾರ್ ಲಕ್ಷ್ಮೀ, ತಾಪಂ ಮಾಜಿ ಸದಸ್ಯ ಎಂ.ಚಂದ್ರಶೇಖರ್, ಗೌಡರ ನಾಗರಾಜು, ಮುಖಂಡರಾದ ಎಂ.ಡಿ. ಬಸವರಾಜು, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪಾರುಪತ್ಯದಾರ ಸಾಗರ್, ಮುಖಂಡರಾದ ಜಗದೀಶ ಮೂರ್ತಿ, ಎಂ.ಕೆ.ಸಿದ್ದರಾಜು, ಸಿ.ಬಿ. ಹುಂಡಿ ಚಿನ್ನಸ್ವಾಮಿ, ಡಾ.ಶಿವಕುಮಾರ್, ಎಂ. ನಾಗೇಂದ್ರ, ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.