ಚಿತ್ರದುರ್ಗ: ಕೋಟೆನಾಡಲ್ಲಿ ಅಹೋಬಲ ನರಸಿಂಹಸ್ವಾಮಿ, ಬೊಮ್ಮಲಿಂಗೇಶ್ವರ ಸ್ವಾಮಿ, ಬೈರಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ಶ್ರದ್ಧಾ-ಭಕ್ತಿಯಿಂದ ಬುಡಕಟ್ಟು ಸಂಸ್ಕೃತಿ, ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಜರುಗಿತು.
ತಾಲೂಕಿನ ಸೊಂಡೆಕೊಳ ಗುಡಿಕಟ್ಟಿನ 33 ಗ್ರಾಮಗಳ ಭಕ್ತರಿಂದ ನಡೆದ ಈ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಇದರ ಜೊತೆಗೆ ಅಲ್ಲಿ ನಡೆದ ಪವಾಡವೊಂದು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತು.
ಗ್ರಾಮದ ಹಳ್ಳದಲ್ಲಿ ಹಾಕಿದ್ದ ಮುಳ್ಳಿನ ರಾಶಿಯ ಮೇಲೆ ಮಕ್ಕಳು, ಯುವಕರು ಅರೆ ಬೆತ್ತಲೆಯಾಗಿ ಉರುಳು ಸೇವೆ ಮಾಡುವ ಮೂಲಕ ಹರಕೆ ತೀರಿಸಿ, ದೇವರಿಗೆ ಭಕ್ತಿ ಸಮರ್ಪಿಸಿದರು. ಪ್ರತಿ 3 ವರ್ಷಕ್ಕೊಮ್ಮೆ ಲೋಕಕಲ್ಯಾಣಾರ್ಥ ನಡೆಯುವ ಈ ಪವಾಡವನ್ನು ಹಲವರು ಕಣ್ತುಂಬಿಕೊಂಡರು.
ಮಳೇಲರು ಹೆಣ್ಣು ಮಕ್ಕಳನ್ನು ಕುದುರೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿದರು. ಉರುಮೆ, ತಮಟೆ ಸೇರಿ ಮಂಗಳವಾದ್ಯಗಳು ಉತ್ಸವಕ್ಕೆ ಮೆರುಗು ನೀಡಿದವು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಇಷ್ಟಾರ್ಥ ಈಡೇರಿಕೆಗಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡರು.