ಕಡೂರು ತಾಲೂಕಿನ ಗೆದ್ಲೆಹಳ್ಳಿ ಸಮೀಪದ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯ ಬಹುಮಹಡಿ ವಸತಿನಿಲಯದ ಕಟ್ಟಡದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಪ್ರವೀಣ್ ಕುಮಾರ್, ಶರಣಪ್ಪ, ಬಸವರಾಜು ಇತರರಿದ್ದರು. 
ನ್ಯೂಸ್

ಮುರಾರ್ಜಿ ವಸತಿ ಶಾಲೆಗಳು ವಿದ್ಯಾರ್ಥಿಗಳಿಗೆ ವರದಾನ

ಕಡೂರು: ಗ್ರಾಮೀಣ ಭಾಗದ ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕ್ಷೇತ್ರದಲ್ಲಿನ ಮುರಾರ್ಜಿ ವಸತಿ ಶಾಲೆಗಳು ವರದಾನವಾಗಿವೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಗೆದ್ಲೆಹಳ್ಳಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಹುಮಹಡಿ ಕಟ್ಟಡದ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಖಾಸಗಿ ಶಾಲೆಗಳ ಆರ್ಭಟದ ನಡುವೆಯೂ ಸರಿಸಮಾನವಾಗಿ ಕ್ಷೇತ್ರದ ಬಹುತೇಕ ಎಲ್ಲ ಮುರಾರ್ಜಿ ವಸತಿ ಶಾಲೆಗಳು ಪೈಪೋಟಿ ನೀಡಿ ಉತ್ತಮ ಫಲಿತಾಂಶ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಮುರಾರ್ಜಿ ವಸತಿ ಶಾಲೆ ಪ್ರವೇಶಕ್ಕೆ ಬೇಡಿಕೆ ಹೆಚ್ಚಿದ್ದು ಹೋಬಳಿಗೆ ಒಂದರಂತೆ ಮುರಾರ್ಜಿ ವಸತಿ ಶಾಲೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತೇನೆ ಎಂದರು.

ಗೆದ್ಲೆಹಳ್ಳಿಯಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಹೆಚ್ಚುವರಿ ಕಟ್ಟಡ ಹಾಗೂ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ 9.85 ಕೋಟಿ ರೂ. ಅನುದಾನ ಮಂಜೂರಾಗಿದ್ದು 5 ಮಹಡಿಯ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ. ಸುಸಜ್ಜಿತ ವ್ಯವಸ್ಥೆಯ ಕೊಠಡಿಗಳು ನಿರ್ಮಾಣವಾಗಲಿದೆ. ಇಲ್ಲಿ ಪಿಯುಸಿ ತನಕ ಕಲಿಕೆಗೆ ಅವಕಾಶವಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕಿದೆ ಎಂದರು.

ರಾಜ್ಯ ಸರ್ಕಾರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದು ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡರೆ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯೆ ಮಂಜುಳಾ ಮಾತನಾಡಿ, ಶಾಲೆ ಆರಂಭವಾದ ವರ್ಷದಲ್ಲಿ ಕೇವಲ 45 ಮಕ್ಕಳು ಪ್ರವೇಶ ಪಡೆದಿದ್ದರು. ಈಗ 250 ಮಕ್ಕಳು ಕಲಿಯುತ್ತಿದ್ದು ಉತ್ತಮ ಫಲಿತಾಂಶ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರವೇಶ ಪಡೆಯುವವರು ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.

ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್‌ಕುಮಾರ್, ಮುಖ್ಯ ಇಂಜಿನಿಯರ್ ಶರಣಪ್ಪ, ಗ್ರಾಪಂ ಉಪಾಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ರಾಜಪ್ಪ, ಸದಸ್ಯ ಶೇಖರಪ್ಪ, ಡಿ.ಕೆ.ಶಿವಕುಮಾರ್, ರವಿಶಂಕರ್ ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು.