ನವೀಕೃತಗೊಂಡು ಎನ್.ಆರ್.ಪುರ ತಾಲೂಕಿನ ಗುಳ್ಳದಮನೆ ಸರ್ಕಾರಿ ಶಾಲೆ 
ನ್ಯೂಸ್

ಮುಚ್ಚುವ ಸ್ಥಿತಿಯಲ್ಲಿದ್ದ ಗುಳ್ಳದಮನೆ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ

ಎನ್.ಆರ್.ಪುರ: ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುವ ಸ್ಥಿತಿಯಲ್ಲಿದ್ದ ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಗುಳ್ಳದಮನೆ ಸರ್ಕಾರಿ ಶಾಲೆ ಇದೀಗ ಗ್ರಾಮಸ್ಥರು, ಹಳೇ ವಿದ್ಯಾರ್ಥಿ ಸಂಘ ಹಾಗೂ ಶಾಲೆಯ ಮುಖ್ಯಶಿಕ್ಷಕಿಯ ಪರಿಶ್ರಮದಿಂದ ಹೈಟೆಕ್ ಸ್ಪರ್ಶ ಪಡೆದಿದೆ.

2023-24ನೇ ಸಾಲಿನಲ್ಲಿ ಗುಳ್ಳದಮನೆ ಸರ್ಕಾರಿ ಶಾಲೆಗೆ ಸುತ್ತಮುತ್ತಲಿನ ಹಳ್ಳಿಗಳಾದ ಅಜ್ಜಿಗುಡ್ಡ, ಕೆಸವಿ, ಹಾಗಲಮನೆ, ಮಾಕೋಡು, ದೇವಾಲೆಕೊಪ್ಪದ ಗ್ರಾಮಗಳಿಂದ 18 ಮಕ್ಕಳು ದಾಖಲಾಗಿದ್ದರು. ಆದರೆ 2024-25ನೇ ಸಾಲಿನಲ್ಲಿ 10 ಮಕ್ಕಳ ಪಾಲಕರು ವರ್ಗಾವಣೆ ಪತ್ರಗಳನ್ನು ಪಡೆದು ಪಟ್ಟಣದ ಖಾಸಗಿ ಶಾಲೆಗೆ ಸೇರಿಸಿದ್ದರಿಂದ ಕೇವಲ 8 ಮಕ್ಕಳು ಮಾತ್ರ ಉಳಿದು ಈ ಶಾಲೆ ಮುಚ್ಚುವ ಸ್ಥಿತಿ ನಿರ್ಮಾಣವಾಗಿತ್ತು.

ಇದನ್ನು ಮನಗಂಡ ಮುಖ್ಯ ಶಿಕ್ಷಕಿ ಶಿಲ್ಪಕುಮಾರಿ ಅವರು ಗ್ರಾಮಗಳಲ್ಲಿನ ಮನೆಗಳಿಗೆ ಭೇಟಿ ಶಾಲೆಯ ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿ, ಎಸ್‌ಡಿಎಂಸಿ, ಗ್ರಾಪಂ, ಸ್ಥಳೀಯರ ಸಹಕಾರ ಪಡೆದು ಶಾಲೆಗೆ ಆಧುನಿಕ ಸ್ಪರ್ಶ ನೀಡಲು ಶ್ರಮಿಸಿದ ಪರಿಣಾಮ ಈ ಬಾರಿ ಮಕ್ಕಳ ಸಂಖ್ಯೆ 14ಕ್ಕೆ ಏರಿದ್ದು ಇನ್ನಷ್ಟು ಮಕ್ಕಳು ದಾಖಲಾಗುವ ಸಾಧ್ಯತೆ ಇದೆ.

ಉತ್ತಮ ಶಿಕ್ಷಣ ದೊರೆಯುವ ಭರವಸೆ: ಶಾಲೆಯಲ್ಲಿ 1ರಿಂದ 5ನೇ ತರಗತಿ ಮಕ್ಕಳಿಗೆ ಪಾಠ ಮಾಡಲು ಒಬ್ಬರೇ ಶಿಕ್ಷಕರಿದ್ದರು. ಶಿಕ್ಷಕರ ಕೊರತೆ ಜತೆಗೆ ಶಾಲೆ ಕೊಠಡಿಗಳು ದುಸ್ಥಿತಿ ತಲುಪಿದ್ದೂ ಕೂಡ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆಯಾಗಲು ಕಾರಣವಾಗಿದೆ. ಶಾಲೆಯಲ್ಲಿ ಮೂಲ ಸೌಕರ್ಯಗಳಿರಲಿಲ್ಲ, ಹಾಗಾಗಿ ಶಾಲೆಯಲ್ಲಿದ್ದ ಮಕ್ಕಳನ್ನು ಪಟ್ಟಣದ ಕೆಪಿಎಸ್‌ಸಿ ಶಾಲೆಗೆ ದಾಖಲಿಸಲಾಗಿತ್ತು. ಇದೀಗ ಶಾಲೆಗೆ ಉತ್ತಮ ಸೌಕರ್ಯ ಕಲ್ಪಿಸಲಾಗಿದ್ದು ಉತ್ತಮ ಶಿಕ್ಷಣ ದೊರೆಯುವ ಭರವಸೆಯಿಂದ ಶಾಲೆಗೆ ಮತ್ತೆ ಮಕ್ಕಳನ್ನು ಮರು ದಾಖಲು ಮಾಡಿಸಿದ್ದೇನೆ ಎಂದು ಪಾಲಕ ನಾಗೇಶ್ ತಿಳಿಸಿದ್ದಾರೆ.