ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ನ್ಯೂಸ್

ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಗೊಂದಲವಿಲ್ಲ: ಸಚಿವ ಎಂ.ಬಿ.ಪಾಟೀಲ | BJP responsible for bills pending

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಸ್ಪರ್ಧೆ ಏರ್ಪಟ್ಟು, ಗೊಂದಲ ಸೃಷ್ಟಿಯಾಗಿಲ್ಲವೆಂದು ಅಲ್ಲಗಳೆದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸುದ್ದಿ ಮಾಧ್ಯಮಗಳಲ್ಲಷ್ಟೇ ಗೊಂದಲವಿದೆ ಎಂಬ ಮಾತನ್ನೂ ಸೇರಿಸಿದರು.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಲು ಭೇಟಿಯಾಗಿದ್ದು, ಯಾವುದೇ ರಾಜಕೀಯ ವಿಷಯ ಚರ್ಚೆಯಾಗಿಲ್ಲ ಎಂದರು.

ಸಿಎಂ ಬದಲಾವಣೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಜಾತಿಗಣತಿ ವರದಿ ಇತ್ಯಾದಿ ಯಾವ ಸಮಸ್ಯೆಗಳು ಪಕ್ಷದಲ್ಲಿಲ್ಲ. ಪ್ರಸ್ತಾಪಿಸಿದ ಎಲ್ಲ ವಿಷಯಗಳ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಇದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕಾರಣಾಂತರಗಳಿಂದ ಸಚಿವ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಸಭೆಗೆ ಬಂದಿಲ್ಲವೆಂದು ಸಮಜಾಯಿಷಿ ನೀಡಿದರು.

ಬೆಳಗಾವಿ ಜಿಲ್ಲೆಯ ರಾಜಕಾರಣ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಜಗಳವಾಗಿಲ್ಲ. ಎಲ್ಲರೂ ಸೇರಿಕೊಂಡು ಪಕ್ಷದ ಕಚೇರಿ ನಿರ್ಮಾಣ ಮಾಡಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಜಾತಿ ಗಣತಿ ವರದಿಗೆ ವಿರೋಧವಿಲ್ಲ

ಜಾತಿ ಗಣತಿ ವರದಿಯನ್ನು ನಾನು ಯಾವತ್ತೂ ವಿರೋಧಿಸಿಲ್ಲ. ಆದರೆ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾ ಬಂದಿದ್ದು, ಲಿಂಗಾಯತರಲ್ಲೇ ಬೇರೆ ಬೇರೆ ಉಪ ಪಂಗಡಗಳು ಬೇರೆ ಬೇರೆ ರೀತಿ ನಮೂದಿಸಿವೆ ಎಂದರು.

ಇಷ್ಟಕ್ಕೂ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿಯನ್ನು ಯಾರೂ ನೋಡಿಲ್ಲ. ವೀರಶೈವ ಮಹಾಸಭಾದವರು ವರದಿಯನ್ನು ವಿರೋಧಿಸುತ್ತಿದ್ದರೆ ಅದು ಅವರ ಹಕ್ಕು. ಸುರ್ಜೇವಾಲ ಕೂಡ ಯಾವುದೇ ಸಮುದಾಯಕ್ಕೆ ನೋವಾಗದಂತೆ ನಡೆದುಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿ ನಾನಲ್ಲ, ಕೈಗಾರಿಕಾ ಸಚಿವನಾಗಿ ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ರಾಜಕೀಯದಲ್ಲಿ ನನಗೆ ಸಹಜವಾದ ಆಸೆ ಇದೆಯೇ ಹೊರತು ದುರಾಸೆಯಿಲ್ಲವೆಂದು ಸ್ಪಷ್ಟಪಡಿಸಿದರು.

ಬಿಜೆಪಿಯೇ ಹೊಣೆ

ಗುತ್ತಿಗೆದಾರರ 32 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿದಿರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ. ಯಾವ ಅನುಮತಿಯಿಲ್ಲದೆ ಎರಡು ಲಕ್ಷ ಕೋಟಿ ರೂ. ಮೊತ್ತದ ಕಾಮಗಾರಿ ಗುತ್ತಿಗೆ ನೀಡಿ ಕೆಲಸ ಶುರು ಮಾಡಿದ್ದರು.

ಹೀಗಾಗಿ 35 ಸಾವಿರ ಕೋಟಿ ರೂ.ಗಳ ಬಿಲ್ ಪಾವತಿಯೇ ಆಗಿರಲಿಲ್ಲ. ಅದೇ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ ಎಂದು ಸಚಿವ ಎಂ.ಬಿ.ಪಾಟೀಲ ದೂರಿದರು.

ಎಂ.ಎಂ.ಕಲ್ಬುರ್ಗಿ ಸಂಪುಟ

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಜತೆಗೆ ಹಿರಿಯ ಸಾಹಿತಿ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ‘ಕಾವೇರಿ’ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯಗೆ ಭೇಟಿ ಮಾಡಿ ಎಂ.ಎಂ.ಕಲ್ಬುರ್ಗಿಯವರ 42 ಸಮಗ್ರ ಸಂಪುಟಗಳ ಬಿಡುಗಡೆಗೆ ದಿನಾಂಕ ನೀಡುವಂತೆ ಮನವಿ ಮಾಡಿದರು.

ಕಲ್ಬುರ್ಗಿಯವರ ಸಾಹಿತ್ಯದ ಸಮಗ್ರ ಸಂಪುಟ ಕುರಿತು ವಿವರಿಸಿದರು. ಅಲ್ಲದೆ, ದಾಸ ಸಾಹಿತ್ಯದ ಸಮಗ್ರ ಸಂಪುಟ ಕೂಡ ಸಿದ್ಧವಾಗುತ್ತಿದ್ದು, ಸರ್ಕಾರದಿಂದ ಬಾಕಿ ಹಣ ಬಿಡುಗಡೆಗೆ ಸೂಚನೆ ನೀಡಲು ಕೋರಿದರು.

ಡಾ.ಕೃಷ್ಣಕೊಲ್ಹಾರ ಕುಲಕರ್ಣಿಯವರ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿ, ಎಂ.ಎಂ.ಕಲ್ಬುರ್ಗಿಯವರ ಸಮಗ್ರ ಸಂಪುಟ ಬಿಡುಗಡೆಗೆ ಶೀಘ್ರವೇ ಸೂಕ್ತ ದಿನಾಂಕ ನಿಗದಿಪಡಿಸುವ ಭರವಸೆ ನೀಡಿದರು.