ಮುಖ್ಯಮಂತ್ರಿ ವಿರುದ್ದ ಯತ್ನಾಳ್ ಹೇಳಿಕೆ: ಡಾ.ಸುಧಾಕರ್ ಖಂಡನೆ
ಕೋಲಾರ
ಮುಖ್ಯಮಂತ್ರಿಗಳ ವಿರುದ್ದ ಮಾಜಿ ಕೇಂದ್ರ ಸಚಿವ ಯತ್ನಾಳ್ ನೀಡಿರುವ ಹೇಳಿಕೆ ಅವರಿಗೆ ಶೋಭೆ ತರೋದಿಲ್ಲ, ಅವರ ವಿರುದ್ದ ಕ್ರಮದ ಕುರಿತು ಹಿರಿಯ ನಾಯಕರು ಹಾಗೂ ಪಕ್ಷ ತೀರ್ಮಾನಿಸುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಗೆ ಗುರುವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಾನೂ ಸೇರಿದಂತೆ ಯಾರೇ ಆಗಲಿ ಮುಖ್ಯಮಂತ್ರಿ ಅಥವಾ ಪಕ್ಷದ ಹಿರಿಯ ನಾಯಕರ ವಿರುದ್ದ ಬಹಿರಂಗ ಹೇಳಿಕೆ ನೀಡುವುದು ತಪ್ಪು, ಕೇಂದ್ರ ಸಚಿವರಾಗಿದ್ದವರು ಯತ್ನಾಳ್ ಈ ರೀತಿ ಮಾತನಾಡಬಾರದು, ಇದು ಅವರ ಘನತೆಗೆ ತಕ್ಕುದಲ್ಲ ಎಂದರು.
ಕೋವಿಡ್ ಪರೀಕ್ಷೆ ದೇಶದಲ್ಲೆ ಅತಿ ಹೆಚ್ಚು 1.7 ಲಕ್ಷ ಟೆಸ್ಟ್ ನಾವು ಮಾಡಿದ್ದೇವೆ, ಸೋಂಕಿತರ ಸಂಖ್ಯೆ ನೋಡುವುದು ಮುಖ್ಯವಲ್ಲ, ಸಾವಿನ ಪ್ರಮಾಣ ಶೇ.1.3ಕ್ಕೆ ಇಳಿದಿದೆ ಅದನ್ನು ನೋಡಿ, ಕೊರೊನಾ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.
ವಿಧಾನಪರಿಷತ್‍ಗೆ ಇಲ್ಲಿ 8 ಬಾರಿ ಬಿಜೆಪಿ ಗೆದ್ದಿದೆ, ಈಗ ಸಚ್ಚಾರಿತ್ರ ಇರುವ ಚಿದಾನಂದಗೌಡರನ್ನು ಕಣಕ್ಕೆ ಇಳಿಸಿದ್ದೇವೆ, ಎಲ್ಲಾ ಕಡೆ ಪಕ್ಷದ ಪರ ಅಲೆ ಇದೆ ಅವರ ಗೆಲುವು ಖಚಿತ ಎಂದರು.
ದೇಶದಲ್ಲಿ ಬಿಜೆಪಿಗೆ ಸದೃಢ ನಾಯಕತ್ವ ಇದೆ, ರಾಜ್ಯದಲ್ಲಿ ಸುಭದ್ರ ಸರ್ಕಾರ ಇದೆ, ಪದವೀಧರರು, ಶಿಕ್ಷಕರು, ಸರ್ಕಾರಿ ನೌಕರರ ಹಿತ ಕಾಯುವ ಶಕ್ತಿಯೂ ಸರ್ಕಾರಕ್ಕಿದೆ, ಸ್ಪಂದಿಸುವ ಗುಣವೂ ಇದೆ, ನಾವೂ ಸಂಘಟಿತ ಹೋರಾಟ ಮಾಡುತ್ತಿದ್ದು, ನಮಗೆ ಬೆಂಬಲ ಸಿಗುತ್ತದೆ ಎಂದರು.
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಬಿಜೆಪಿಗೆ ಬಂಡಾಯ ಎದುರಿಸುವ ಶಕ್ತಿ ಇದೆ ಎಂದು ತಿಳಿಸಿದರು.