ರಾಣೆಬೆನ್ನೂರ: ‘ಕರೊನಾ ಎರಡನೇ ಅಲೆ ಶುರವಾದ ದಿನದಿಂದ ಇಲ್ಲಿಯವರೆಗೂ ನಗರದ ದೇವರಗುಡ್ಡ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಶವಸಂಸ್ಕಾರ ನಿರಂತರವಾಗಿ ನಡೆಯುತ್ತಲೇ ಇದೆ. ಸಾಮಾನ್ಯ ದಿನಗಳಲ್ಲಿ ವಾರಕ್ಕೆ ಎರಡು ಅಥವಾ ಮೂರು ಶವ ಸುಟ್ಟರೆ ಬಹಳ ಎನ್ನುವಂತ್ತಿತ್ತು. ಆದರೀಗ ಚಿತಾಗಾರದಲ್ಲಿ ಸಾವಿನ ಧಗೆ ನಿಲ್ಲುತ್ತಿಲ್ಲ. ದಿನಕ್ಕೆ ಎರಡ್ಮೂರು ಶವ ಸುಡುವುದು ತಪ್ಪುತ್ತಿಲ್ಲ. ಕೆಲವೊಮ್ಮೆ ಏಳೆಂಟು ಶವ ಸುಟ್ಟಿದ್ದೂ ಇದೆ’.
ಮುಕ್ತಿಧಾಮದಲ್ಲಿ ಶವ ಸಂಸ್ಕಾರ ಮಾಡುವ ಕೃಷ್ಣಮೂರ್ತಿ ಹೀಗೆ ಹೇಳುತ್ತ, ಒಂದು ಕ್ಷಣ ಮೌನಕ್ಕೆ ಜಾರಿದರು. ನಗರದ ದೇವರಗುಡ್ಡ ರಸ್ತೆಯ ಮುಕ್ತಿಧಾಮವೊಂದರಲ್ಲಿಯೇ 45 ದಿನದಲ್ಲಿ 104ಕ್ಕೂ ಅಧಿಕ ಕರೊನಾ ಸೋಂಕಿತರು ಹಾಗೂ ಇತರ ಕಾರಣಗಳಿಂದ ಮೃತಪಟ್ಟವರ ಶವಗಳ ಸಂಸ್ಕಾರ ಮಾಡಲಾಗಿದೆ.
ಶವ ಸುಟ್ಟ ನಂತರ ಅದರ ಬೂದಿ ತೆಗೆದು ಇನ್ನೊಂದು ಶವಸಂಸ್ಕಾರ ಮಾಡಲು 4 ಗಂಟೆ ಸಮಯ ಬೇಕಾಗುತ್ತದೆ. ಚಿತಾಗಾರದಲ್ಲಿನ ಬೂದಿಯ ಬಿಸಿ ಆರುವವರೆಗಾದರೂ ಕಾಯಬೇಕು. ಆದರೆ, ಕರೊನಾ ಅಟ್ಟಹಾಸ ಎಷ್ಟಿದೆಯೆಂದರೆ, ಬಿಸಿಯಾರದ ಬೂದಿಯನ್ನು ಪ್ರತ್ಯೇಕ ಟ್ರೇನಲ್ಲಿ ತೆಗೆದಿಟ್ಟು ಮತ್ತೊಂದು ಶವ ಸುಡಲು ವ್ಯವಸ್ಥೆ ಮಾಡಲಾಗುತ್ತಿದೆ. ಮುಕ್ತಿಧಾಮದ ಹೊರಗೆ ಶವ ಇಟ್ಟುಕೊಂಡು ತಮ್ಮ ಸರದಿಗಾಗಿ ಕಾಯುವ ಮೃತರ ಕುಟುಂಬಸ್ಥರನ್ನು ನೋಡಿದರೆ, ಕರೊನಾದ ಭಯಾನಕತೆ ಕಣ್ಣಿಗೆ ಕಟ್ಟುತ್ತದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಒಂದೇ ಮುಕ್ತಿಧಾಮ: ವಾಣಿಜ್ಯ ನಗರಿ ರಾಣೆಬೆನ್ನೂರಿನ ಜನಸಂಖ್ಯೆ 2 ಲಕ್ಷಕ್ಕೂ ಮೀರಿದೆ. ಆದರೆ, ಶವ ಸಂಸ್ಕಾರಕ್ಕೆ ದೇವರಗುಡ್ಡ ರಸ್ತೆಯ ಮುಕ್ತಿಧಾಮ ಚಿತಾಗಾರ ಒಂದೇ ಆಗಿದೆ. ಇದನ್ನು ಹೊರತು ಪಡಿಸಿದರೆ, ಹಲಗೇರಿ ರಸ್ತೆ ಹಾಗೂ ದೇವರಗುಡ್ಡ ರಸ್ತೆಯಲ್ಲಿ ಎರಡು ವೀರಶೈವ ಲಿಂಗಾಯತ ರುದ್ರಭೂಮಿಗಳಿವೆ. ಆದರೆ, ಈ ರುದ್ರಭೂಮಿಯಲ್ಲಿ ಮಣ್ಣು ಮಾಡಲು ವ್ಯವಸ್ಥೆಯಿದೆ. ಚಿತಾಗಾರದ ವ್ಯವಸ್ಥೆ ಇಲ್ಲ.
ಮುಕ್ತಿಧಾಮದ ಚಿತಾಗಾರದಲ್ಲಿ ಎರಡು ಚೇಂಬರ್ನ ವ್ಯವಸ್ಥೆಯಿದ್ದು, ಸದ್ಯ ಎರಡೂ ವ್ಯಸ್ತವಾಗಿವೆ. ಕರೊನಾ ಪೂರ್ವದಲ್ಲಿ ವಾರದಲ್ಲಿ ಎರಡ್ಮೂರು ಶವ ಸಂಸ್ಕಾರ ಮಾಡಲಾಗುತ್ತಿತ್ತು. ಆದರೀಗ ಶವಸಂಸ್ಕಾರಕ್ಕೆ ನಿರ್ದಿಷ್ಟ ಸಮಯವಿಲ್ಲ. ಒಂದರ ಬೆನ್ನಿಗೆ ಮತ್ತೊಂದು ಶವ ಬರುತ್ತವೆ.
ಮುಕ್ತಿಧಾಮದ ಎರಡೂ ಚಿತಾಗಾರವನ್ನು ಬಳಸಿಕೊಂಡು ಮೃತರಿಗೆ ಗೌರವಯುತ ವಿದಾಯ ಹೇಳಲಾಗುತ್ತದೆ. ಒಂದೊಂದು ದಿನ ಆರೇಳು ಶವಗಳು ಒಂದೇ ಸಮಯದಲ್ಲಿ ಸಂಸ್ಕಾರಕ್ಕಾಗಿ ಬಂದಿದ್ದೂ ಇದೆ. ಸರದಿ ಪ್ರಕಾರ ಮರುದಿನ ಬೆಳಗಿನವರೆಗೆ ಸುಡಲಾಗಿದೆ ಎಂದು ಮುಕ್ತಿಧಾಮದ ಶವ ಸಂಸ್ಕಾರ ಮಾಡುವ ಸಿಬ್ಬಂದಿ ಕೃಷ್ಣಮೂರ್ತಿ ವಿವರಿಸುತ್ತಾರೆ. ಆದಷ್ಟು ಬೇಗ ಇಂಥ ಸಾವುಗಳು ಕ್ಷಿಣಿಸಲಿ ಎಂದು ಅವರು ಆಶಯ ವ್ಯಕ್ತ ಪಡಿಸಿದರು.
ಸದ್ಯ ಚಿತಾಗಾರಕ್ಕೆ ಹೆಚ್ಚಿನ ಶವಗಳು ಬರುತ್ತಿರುವ ಕಾರಣ ಕಟ್ಟಿಗೆ ಬಳಕೆ ಹೆಚ್ಚುತ್ತಿದೆ. ಆದರೆ, ಕಟ್ಟಿಗೆಗೆ ಬೆಂಕಿ ಹಚ್ಚಲು ಸೀಮೆ ಎಣ್ಣೆ ಸಹ ದೊರೆಯುತ್ತಿಲ್ಲ. ಒಮ್ಮೊಮ್ಮೆ ಡೀಸೆಲ್ ಹಾಕಿ ಉರಿಸುವ ಸ್ಥಿತಿ ಎದುರಾಗಿದೆ. ಆದ್ದರಿಂದ ಸಿಲಿಕಾನ್ ಚೇಂಬರ್ ವ್ಯವಸ್ಥೆ ಕಲ್ಪಿಸಿಕೊಡಲು ಹಾಗೂ ಸೀಮೆ ಎಣ್ಣೆ ನೀಡುವಂತೆ ತಹಸೀಲ್ದಾರ್ಗೆ ಬೇಡಿಕೆ ಇಟ್ಟಿದ್ದೇವೆ. ಆದಷ್ಟು ಬೇಗ ಅವರು ಸ್ಪಂದಿಸಿದರೆ ಅನುಕೂಲವಾಗಲಿದೆ ಎಂದು ಮುಕ್ತಿಧಾಮ ಟ್ರಸ್ಟ್ನ ಅಧ್ಯಕ್ಷ ಎಸ್.ಎಲ್. ಪವಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಮುಕ್ತಿಧಾಮಕ್ಕೆ ಇನ್ನೊಂದು ಚೇಂಬರ್ನ ವ್ಯವಸ್ಥೆ ಕಲ್ಪಿಸಿಕೊಡುವಂತೆ ನಗರಸಭೆಗೆ ಮನವಿ ಮಾಡಿದ್ದೇವೆ. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಇನ್ನೊಂದು ವಾರ ನೋಡುತ್ತೇವೆ. ಇಲ್ಲವಾದರೆ ನಾವೇ ಬೇರೆಯ ದಾನಿಗಳ ಮೂಲಕ ಇನ್ನೊಂದು ಚೇಂಬರ್ನ ವ್ಯವಸ್ಥೆ ಮಾಡುತ್ತೇವೆ.| ಕೆ.ವಿ. ಶ್ರೀನಿವಾಸ, ಮುಕ್ತಿಧಾಮ ಟ್ರಸ್ಟ್ನ ಕಾರ್ಯದರ್ಶಿಕರೊನಾ ಸಮಯದಲ್ಲಿ ಶವಗಳನ್ನು ಮುಟ್ಟಲು ಅವರ ಸಂಬಂಧಿಕರೇ ಮುಂದೆ ಬರದ ಸ್ಥಿತಿಯಿದೆ. ಇಂಥ ಸಮಯದಲ್ಲಿ ಎಷ್ಟೋ ಶವಗಳನ್ನು ನಾವೇ ಚಿತಾಗಾರದಲ್ಲಿ ಮಲಗಿಸಿ ಸಂಸ್ಕಾರ ಮಾಡಿದ್ದೇವೆ. ಇದೊಂದು ಪುಣ್ಯದ ಕೆಲಸ ಎಂದುಕೊಂಡು ಮಾಡುತ್ತಿದ್ದೇವೆ. ಕುಟುಂಬ ಸಮೇತ ಮುಕ್ತಿಧಾಮದಲ್ಲೇ ವಾಸವಾಗಿದ್ದೇವೆ. ಕೋವಿಡ್ನಿಂದ ಮೃತಪಟ್ಟ ಶವ ತರುವವರಿಗೆ ನಮಗೂ ಪಿಪಿಇ ಕಿಟ್ ತರಲು ಮೊದಲೇ ಹೇಳಿರುತ್ತೇವೆ. ಅವರು ಬಂದ ಕೂಡಲೆ ನಾವು ಕಿಟ್ ಧರಿಸಿ ಶವಸಂಸ್ಕಾರ ಮಾಡುತ್ತೇವೆ. ಆದರೆ, ಭಯ, ಆತಂಕ, ಹತಾಶೆ ನಡುವೆ ನಿತ್ಯ ಶವಗಳ ಸಂಸ್ಕಾರ ಮಾಡುತ್ತೇವೆ.| ಕೃಷ್ಣಮೂರ್ತಿ, ಶವ ಸಂಸ್ಕಾರ ಮಾಡುವ ನೌಕರ