ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲಯುತವಾಗಿದ್ದು, ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಮುಂಬರುವ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಲಿದೆ ಎಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆರ್.ಮಾದೇಶ್ ಹೇಳಿದರು.
ನಗರದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿರುವ ಮಹದೇಶ್ವರ ಭವನದಲ್ಲಿ ಆಯೋಜಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಂಜನಗೂಡು ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದು, ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ಟಿ.ಜಯಕುಮಾರ್ ತಳಮಟ್ಟದಿಂದ ಪಕ್ಷ ಕಟ್ಟಿದ್ದರು. ಬಳಿಕ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಳಲೆ ಕೇಶವಮೂರ್ತಿ ಮತ್ತು ದಯಾನಂದ ಮೂರ್ತಿ ಅವರು ಪಕ್ಷ ತೊರೆದರೂ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಸದೃಢವಾಗಿದೆ ಎಂದರು.
ಬಿಜೆಪಿ ಸರ್ಕಾರದ ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಕೂಡ ಬಡಜನರು, ರೈತರಿಗೆ ನೆರವಾಗುವಂತಹ ಕಾರ್ಯಕ್ರಮ ರೂಪಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಜನಸಾಮಾನ್ಯರು, ರೈತರ ಬದುಕು ಹಸನಾಗಬೇಕೆಂದರೆ ಅದು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ಆದ್ದರಿಂದಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಿ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಸಂಚರಿಸುತ್ತಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಗಿನವಾಳು ಸುರೇಶ್ ಮಾತನಾಡಿದರು. ಮಾದಾಪುರ, ಬಸಾಪುರ, ಹಗಿನವಾಳು, ಕಪ್ಪಸೋಗೆ ಗ್ರಾಮದ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಪಕ್ಷದ ಶಾಲು ಮತ್ತು ಧ್ವಜ ನೀಡಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ ಬರಮಾಡಿಕೊಂಡರು.
ತಾಲೂಕು ರೈತ ಸಂಘದ ಅಧ್ಯಕ್ಷ ರೇಣುಕಾಪ್ರಸಾದ್, ಮುಜಾಹಿದ್, ಪುನೀತ್‌ಗೌಡ, ನಾಗೇಂದ್ರ, ನಾಗೇಗೌಡ, ಶ್ರೀಧರ್, ಪಾಪಣ್ಣ, ವಿಶ್ವಾಸ್‌ಗೌಡ ಇತರರು ಭಾಗವಹಿಸಿದ್ದರು.