ಸಂತೋಷ ಮುರಡಿ ಮುಂಡರಗಿ
ನೂರಾರು ಬೆಳ್ಳಗಿರುವ ದೇಸಿ ಹಸುಗಳು. ಅವುಗಳೊಂದಿಗೆ ಚಿನ್ನಾಟವಾಡುವ ಮುದ್ದಾದ ಕರುಗಳು. ಈ ಎಲ್ಲ ದನ-ಕರುಗಳು ಒಟ್ಟಾಗಿ ಸಾಗುತ್ತಿದ್ದರೆ ನೋಡುವುದೇ ಕಣ್ಣಿಗೆ ಹಬ್ಬ. ಹತ್ತಾರು ಸಂಕಷ್ಟಗಳ ಮಧ್ಯೆ ರೈತರು ಜಾನುವಾರು ಸಾಕುವುದನ್ನೇ ಕೈಬಿಡುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ಇಲ್ಲೊಬ್ಬ ಗೋಪಾಲಕ ಸದ್ದಿಲ್ಲದೇ ಗೋವುಗಳ ಆರಾಧನೆಯಲ್ಲಿ ತೊಡಗಿದ್ದಾನೆ. ಗೋವುಗಳ ಹಿಂಡಿನೊಂದಿಗೆ ಊರಿಂದ ಊರಿಗೆ ಸಾಗುತ್ತಾ ಗೋಸ್ವರ್ಗವನ್ನೇ ಸೃಷ್ಟಿಸಿದ್ದಾನೆ.
ಇವರು ಮೂಲತಃ ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ದನಕನದಡ್ಡಿ ಗ್ರಾಮದ ನಿವಾಸಿ, ಗೋಪಾಲಕ ಬೀರಪ್ಪ ಒಗಲಬಂಡಿ. 15 ವರ್ಷಗಳಿಂದ ಗೋರಕ್ಷಣೆ ಮಾಡುತ್ತಾ ಇಡೀ ಜೀವನವನ್ನು ಗೋವುಗಳ ರಕ್ಷಣೆಗಾಗಿ ಮುಡಿಪಾಗಿಟ್ಟಿದ್ದಾರೆ. ಸದ್ಯ ಮುಂಡರಗಿ ಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ. ಬೀರಪ್ಪನನವರ ತಂದೆ 100 ಹಸುಗಳ ಸಾಕಾಣಿಕೆಯಲ್ಲಿ ತೊಡಗಿದ್ದರು. ಈಗ ಬೀರಪ್ಪನವರು 400ಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಿ ಪೋಷಿಸುತ್ತಿದ್ದಾರೆ. ಕಿರಿಯ ಸಹೋದರ ಮತ್ತು ಇಬ್ಬರು ಅಳಿಯಂದಿರ ಜತೆಗೆ ಗೋಪಾಲನೆಗೆ ಮೇವು ಹುಡುಕಿಕೊಂಡು ಊರೂರು ಅಲೆಯುತ್ತಾರೆ. ಮೇವು ಕಂಡೊಡನೆ ಅಲ್ಲೇ ಬಿಡಾರ ಹೂಡುತ್ತಾರೆ. ಕೆಲದಿನಗಳ ನಂತರ ಮತ್ತೊಂದೂರಿಗೆ ಪ್ರಯಾಣ ಬೆಳೆಸುತ್ತಾರೆ.
ಹೀಗೆ… ಗಂಗಾವತಿ, ಬಳ್ಳಾರಿ, ಹೂವಿನಹಡಗಲಿ, ಗದಗ ಭಾಗದಲ್ಲಿ ಮೇವು ಅರಸಿ ಅಲೆಮಾರಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೇ ತೃಪ್ತಿಕರವಾದ ಬದುಕು ಕಂಡುಕೊಂಡಿದ್ದಾರೆ. ಹೀಗೆ ಸಂಚರಿಸುವಾಗ ಯಾರಾದರೂ ರೈತರು ತಮ್ಮ ಜಮೀನಿನಲ್ಲಿ ಹಸುಗಳೊಂದಿಗೆ ಉಳಿದುಕೊಳ್ಳಲು ಹೇಳಿದರೆ ಒಂದಷ್ಟು ಹಣ ಪಡೆದು ತಾತ್ಕಾಲಿಕವಾಗಿ ಅಲ್ಲಿಯೇ ಉಳಿಯುತ್ತಾರೆ. ಹಣಕ್ಕಿಂತ ರೈತರಿಗೆ ಅನುಕೂಲವಾಗಲಿ ಎನ್ನುವುದು ನಮ್ಮ ಆಶಯ ರೈತರು ಕೊಡುವ ಹಣ ನಮ್ಮ ದನ-ಕರುಗಳ ಆರೈಕೆಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಬೀರಪ್ಪ. ರೈತರೇ ತಿಳಿದು ದವಸ, ದಾನ್ಯಗಳನ್ನು ಕೊಟ್ಟು ಕಳುಹಿಸುತ್ತಾರೆ. ಹಸುಗಳ ಸೆಗಣಿಯ ಗೊಬ್ಬರ ಭೂಮಿಯ ಫಲತ್ತತೆಗೆ ಅನುಕೂಲ. ಹೀಗಾಗಿ ರೈತರು ಭೂಮಿ ಹದಗೊಳಿಸಬೇಕಾದ ಸಮಯದಲ್ಲಿ ಹಸುಗಳನ್ನು ಹೊಲದಲ್ಲಿ ಉಳಿಸಿಕೊಳ್ಳುತ್ತಾರೆ. ಬೀರಪ್ಪ ಕುಟುಂಬದವರು ಹಸುಗಳನ್ನು ಮಾರಾಟ ಮಾಡುವುದಿಲ್ಲ. ಯಾರಾದರೂ ರೈತರು ಹೋರಿಕರ ಸಾಕಾಣಿಕೆ ಮಾಡಲು ಕೇಳಿದರೆ ಮಾತ್ರ ಮಾರಾಟ ಮಾಡುತ್ತಾರೆ. ಅದರಿಂದ ಬರುವ ಹಣದಲ್ಲಿ ತಮ್ಮ ಕುಟುಂಬದ ಬದುಕು ಸಾಗಿಸುತ್ತಾರೆ. ಹಸು-ಕರಗಳ ಸಂತತಿ ಹೆಚ್ಚಿಸುವು ಉದ್ದೇಶದಿಂದ ಅವುಗಳನ್ನು ಮಾರಾಟ ಮಾಡುವುದಿಲ್ಲ.
ಗೋವುಗಳು ಕಾಯಿಲೆಯಿಂದ ಬಳಲಿದರೆ ಬೀರಪ್ಪ ಸ್ವಂತ ಹಣದಲ್ಲಿ ಪಶು ಔಷಧ ಅಂಗಡಿಗಳನ್ನು ಸಂರ್ಪಸಿ ಕಾಯಿಲೆಗೆ ಸಂಬಂಧಿಸಿದ ಔಷಧ ಪಡೆದುಕೊಂಡು ಬಂದು ಜ್ವರ, ಗಾಯ, ಸುಸ್ತಾದ ಗೋವುಗಳಿಗೆ ಸ್ವತಃ ತಾವೇ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ.
ಹಾಲು ಮಾರುವುದಿಲ್ಲ: ಬೀರಪ್ಪ ಅವರ ಬಳಿ ಸುಮಾರು 400 ಹಸುಗಳ ಪೈಕಿ ಕೆಲವು ಹಸುಗಳು ಹಾಲು ಕೊಡುತ್ತವೆ. ಈ ಹಾಲನ್ನು ಮಾರಾಟ ಮಾಡಿದರೆ ಸಾವಿರಾರು ರೂ. ಸಂಪಾದನೆ ಮಾಡಬಹುದು. ಆದರೆ, ಇವರಿಗೆ ಹಣ ಸಂಪಾದನೆಯ ಅಪೇಕ್ಷೆ ಇಲ್ಲ. ಬದಲಿಗೆ ಆ ಹಾಲವನ್ನು ಕರುಗಳಿಗೆ ಬಿಡುತ್ತಾರೆ. ಕೆಲವೊಮ್ಮೆ ಹಸುಗಳಿಗೆ ಮೇವಿನ ಕೊರತೆ ಇದ್ದಾಗ ಕರುಗಳಿಗೆ ತೊಂದರೆಯಾಗಬಾರದು ಎಂದು ಹಾಲನ್ನೆಲ್ಲ ಕರುಗಳಿಗೆ ಕುಡಿಯಲು ಬಿಡುತ್ತಾರೆ.
ಇಷ್ಟೊಂದು ಹಸುಗಳನ್ನು ಒಂದೆಡೆ ಸಾಕಲು ನಮಗೆ ಸಾಧ್ಯವಿಲ್ಲ. ಹೀಗಾಗಿ ಮೇವಿಗಾಗಿ ಹಸುಗಳೊಂದಿಗೆ ಊರೂರು ಅಲೆಯುತ್ತೇವೆ. ಪರಂಪರಾಗತದಿಂದ ನಮ್ಮ ಕುಟುಂಬ ಗೋವುಗಳ ರಕ್ಷಣೆಯಲ್ಲಿ ತೊಡಗಿದೆ. ಅದನ್ನು ಇಂದಿಗೂ ನಾವು ಮುಂದುವರಿಸಿಕೊಂಡು ಬರುತ್ತಿದ್ದೇವೆ. ಮೊದಲು 100 ಹಸುಗಳಿದ್ದವು. ಈಗ 400ಕ್ಕೂ ಹೆಚ್ಚು ಹಸುಗಳಿವೆ. ಮೊದಲು ಹಸುಗಳಿಗೆ ಕಾಯಿಲೆ ಬಂದು ಅಥವಾ ವಯಸ್ಸಾಗಿ ಮೃತಪಟ್ಟರೆ ಸರ್ಕಾರದಿಂದ 10 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು. ಆದರೆ, ಈಗ ಪರಿಹಾರ ನೀಡುತ್ತಿಲ್ಲ. ಸರ್ಕಾರದಿಂದ ನಮ್ಮಂಥವರಿಗೆ ನೆರವು ನೀಡಬೇಕು.| ಬೀರಪ್ಪ ಒಗಲಬಂಡಿ ಗೋಪಾಲಕ