ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಸಾಕಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಎಚ್. ರವಿ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕವು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಮುಂಗಾರು ತಾಂತ್ರಿಕ ಅಧಿವೇಶನ-2025 ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆ ಶೇ.104-105 ರಷ್ಟು ಆಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಅರ್ಥಾತ್ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಇದಕ್ಕಾಗಿ ಜಿಲ್ಲೆಯ 33 ರೈತ ಸಂಪರ್ಕ ಕೇಂದ್ರಗಳಲ್ಲೂ ಹೆಸರು, ಉದ್ದು, ಅಲಸಂದೆ, ಮುಸುಕಿನ ಜೋಳ ಬಿತ್ತನೆಬೀಜ ದಾಸ್ತಾನು ಮಾಡಲಾಗಿದೆ. ಮುಂದೆ ರಾಗಿ ಹಾಗೂ ಭತ್ತದ ಬಿತ್ತನೆಬೀಜವೂ ಸಿಗಲಿದೆ ಎಂದರು.
ಜಿಲ್ಲೆಗೆ 30,000 ಕ್ವಿಂಟಲ್ ಬಿತ್ತನೆಬೀಜ ಬೇಕು. 49,000 ಕ್ವಿಂಟಲ್ ದಾಸ್ತಾನಿದೆ. ರಸಗೊಬ್ಬರ 91 ಮೆಟ್ರಿಕ್ ಟನ್ ಬೇಕು. ಈಗ 67 ಮೆಟ್ರಿಕ್ ಟನ್ ದಾಸ್ತಾನಿದೆ. ಜೂನ್‌ಗೆ 16 ಮೆಟ್ರಿಕ್ ಟನ್ ಸಾಕು. ರೈತರು ಡಿಎಪಿ ಸಿಗದಿದ್ದಲ್ಲಿ ಪರ್ಯಾಯವಾಗಿ ಎನ್‌ಪಿಕೆ ರಸಗೊಬ್ಬರ ಹಾಕಬೇಕು ಎಂದು ಅವರು ಸಲಹೆ ಮಾಡಿದರು.
ಜಮೀನಿಗೆ ಪೋಟ್ಯಾಷ್ ನೀಡಿದಲ್ಲಿ ರೋಗನಿರೋಧಕ, ಬರ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಯೂರಿಯಾವನ್ನು ಮೇಲುಗೊಬ್ಬರವಾಗಿ ಮಾತ್ರ ಕೊಡಬೇಕು ಭತ್ತವನ್ನು ಪದೇ ಪದೇ ಬೆಳೆಯುವ ಬದಲು ಮಧ್ಯದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು. ಏಕೆಂದರೆ ಜಿಲ್ಲೆಯ ಶೇ.53 ರಷ್ಟು ಜಮೀನಿನಲ್ಲಿ ಸಾವಯವ ಇಂಗಾಲದ ಅಂಶ ಕಡಿಮೆ ಇದೆ ಎಂದರು.
ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಪಡೆಯಬೇಕು. ಭತ್ತ ಕಟಾವು ಯಂತ್ರಗಳಿಗೆ ಸಾಕಷ್ಟು ಸಬ್ಸಿಡಿ ಇದ್ದು,. ಇದರ ಪ್ರಯೋಜನ ಪಡೆಯಬೇಕು ಎಂದರು.
ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ ಮಾತನಾಡಿ, ರೈತರು ಮುಂಗಾರನ್ನು ಹಬ್ಬದಂತೆ ಸಂಭ್ರಮಿಸಬೇಕು.
ಈ ಬಾರಿ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗುವುದರಿಂದ ಕಡಿಮೆ ವೆಚ್ಚದಲ್ಲಿ ವ್ಯವಸಾಯ ಮಾಡಿ, ಹೆಚ್ಚಿನ ಲಾಭ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಜಿಕೆವಿಕೆ ಸಹ ಸಂಶೋಧನಾ ನಿರ್ದೇಶಕ ಡಾ.ಚಿಕ್ಕಲಿಂಗಯ್ಯ ಮಾತನಾಡಿ, ಪೂರ್ವಿಕರು ರಾಗಿ, ನವಣೆ, ಆರ್ಕ, ಮೆಣಸಿನಕಾಯಿ, ಹುಚ್ಚೆಳ್ಳು ಸೇರಿದಂತೆ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಬೆಳೆಯುತ್ತಿದ್ದರು. ಈಗ ಒಂದು ಅಥವಾ ಎರಡು ಬೆಳೆ ಬೆಳೆದರೆ ಹೆಚ್ಚು. ಇದರ ಬದಲು ಮನೆ ಬಳಕೆಗೆ ಬೇಕಾದ ವಸ್ತುಗಳನ್ನು ನಾವೇ ಬೆಳೆಯಬೇಕು ಎಂದರು.
ರೇಷ್ಮೆ ಬೆಳೆ ಜೊತೆಗೆ ಎರಡು ಹಸುಗಳನ್ನು ಸಾಕಿದರೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಸರ್ಕಾರಿ ನೌಕರರಂತೆ ಪ್ರತಿ ತಿಂಗಳು ಹಣ ಎಣಿಸಬಹುದು ಎಂದು ಅವರು ಹೇಳಿದರು.
ಕೇಂದ್ರ ವಿಸ್ತರಣಾ ಮುಂದಾಳು ಹಾಗೂ ಬೇಸಾಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ. ರಾಮಚಂದ್ರು ಪ್ರಾಸ್ತಾವಿಕ ಭಾಷಣ ಮಾಡಿ, ಮುಂಗಾರಿನಲ್ಲಿ ರೈತರು ಉತ್ತಮವಾಗಿ ಬೆಳೆ ಬೆಳೆದು ಹೆಚ್ಚಿನ ಲಾಭ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಗುಣಮಟ್ಟದ ತಳಿ, ಬಿತ್ತನೆಬೀಜ, ರಸಗೊಬ್ಬರ, ಆಧುನಿಕ ಪದ್ಧತಿಯ ಬಗ್ಗೆ ಮಾಹಿತಿ ನೀಡಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಭತ್ತ, ರಾಗಿ, ಮುಸುಕಿನ ಜೋಳ, ಅಲಸಂದೆ, ಸೂರ್ಯಕಾಂತಿ, ಹರಳು ಮತ್ತಿತರ ಬೆಳೆಯ ನೂತನ ತಳಿಗಳ ಬಗ್ಗೆ ಅವರು ಮಾಹಿತಿ ನೀಡಿದರು.
ನಾಗನಹಳ್ಳಿ ಗ್ರಾಪಂ ಅಧ್ಯಕ್ಷೆ ಸಿ. ರಶ್ಮಿ ಕಾರ್ಯಕ್ರಮ ಉದ್ಘಾಟಿಸಿ, ರೈತ ದೇಶದ ಬೆನ್ನೆಲಬು. ಅವರಿಗೆ ಒಳ್ಳೆಯದಾಗಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಪಿಡಿಒ ಟಿ.ಎ. ಭವ್ಯಾ, ಬೇಸಾಯಶಾಸ್ತ್ರಜ್ಞ ರಾಜೇಶ್, ಒಡಿಪಿಯ ರಮೇಶ್, ಖಾಸಗಿ ಕಂಪನಿಯ ಭರತ್ ರೆಡ್ಡಿ ಮೊದಲಾದವರು ಇದ್ದರು. ಸಾವಯವ ಕೃಷಿ ಸಂಶೋಧನಾ ಕೇಂದ್ರದ ಸಸ್ಯ ರೋಗಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಎನ್. ಉಮಾಶಂಕರ್ ಕುಮಾರ್ ನಿರೂಪಿಸಿದರು. ತಾಂತ್ರಿಕ ಅಧಿಕಾರಿ ಡಾ.ಜಿ.ವಿ, ಸುಮಂತ್ ಕುಮಾರ್ ವಂದಿಸಿದರು. ಗೌರಿ ಮತ್ತು ತಂಡದವರು ಪ್ರಾರ್ಥಿಸಿದರು.