ಕೊಪ್ಪ: ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ಪ್ರಮುಖ ವಿಷಯ ಚರ್ಚೆಗೊಳ್ಳದೆ ಹೆಚ್ಚಿನ ಕಾಲ ವಾಗ್ವಾದ ನಡೆಯಿತು.
ಶನಿವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಖಾ ಪ್ರಕಾಶ್ ಅವರು ಹುಚ್ಚುರಾಯರ ಕೆರೆ ಮೇಲ್ಬಾಗದಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಕಾಮಗಾರಿ ಬಗ್ಗೆ ಪ್ರಮುಖವಾಗಿ ಚರ್ಚಿಸಲು ತುರ್ತು ಸಭೆ ಕರೆದಿದ್ದರು. ಆದರೆ ಮೀಟಿಂಗ್ ನೋಟಿಸ್‌ನಲ್ಲಿ ಲೇಔಟ್ ಹೆಸರು ಕಾಣಿಸದೆ ಹುಚ್ಚುರಾಯರ ಕೆರೆ ಸಮೀಪ ನಿರ್ಮಾಣವಾಗುತ್ತಿರುವ ಕಾಮಗಾರಿ ಎಂದು ಮುದ್ರಿಸಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಸದಸ್ಯರು ಖಾಸಗಿ ಲೇಔಟ್‌ನ ಬಗ್ಗೆ ಚರ್ಚಿಸಲು ಮುಂದಾಗಿಲ್ಲ. ಆಡಳಿತಾರೂಢ ಬಿಜೆಪಿ ಎಷ್ಟೇ ಪ್ರಯತ್ನಪಟ್ಟರೂ ಸ್ವತಃ ಅಧ್ಯಕ್ಷರು ಆಗಿರುವ ತಪ್ಪನ್ನು ಒಪ್ಪಿಕೊಂಡರೂ ಚರ್ಚೆ ನಡೆಯಲಿಲ್ಲ.
ಕೆರೆ ಬಗ್ಗೆ ಚರ್ಚೆ ನಡೆಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಕನಿಷ್ಠ 2 ಗಂಟೆ ಚರ್ಚೆ ನಡೆದಿದೆ. ಈ ಮಧ್ಯೆ ಅಧ್ಯಕ್ಷರು ಸಭೆಯನ್ನು 10 ನಿಮಿಷಕ್ಕೆ ಮುಂದಕ್ಕೆ ಸಹ ದೂಡಿದರು. 7 ಗಂಟೆಯಾದರೂ ಸಭೆ ಮುಗಿಯದ ಕಾರಣ ಕೆಲ ಸದಸ್ಯರು ಸಭೆ ಮುಗಿಸಿ ಎಂದು ಮನೆಗೆ ಹೊರಟು ನಿಂತಿದ್ದು ಕಂಡುಬಂತು.
ಪಪಂ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಹೇಮಾವತಿ, ಗಾಯತ್ರಿ ವಸಂತ್, ಸುಜಾತಾ ವಸಂತ್, ಮಹಮ್ಮದ್ ಗೌಸ್, ಸುಮಾ ಇದ್ದರು.