ಮೈಸೂರು ; ವೇದಗಣಿತವು ಮಿದುಳಿಗೆ ಕಸರತ್ತು ನೀಡಿ ವಿನೋದದ ಚಮತ್ಕಾರದ ಮೂಲಕ ಗಣಿತ ಬೋಧನೆಗೆ ಸಹಕಾರಿಯಾಗಿದೆ ಎಂದು ಬಿಇಒ ಎಸ್.ರೇವಣ್ಣ ಅಭಿಪ್ರಾಯಪಟ್ಟರು.
ಹುಣಸೂರು ನಗರದ ಬಿಆರ್‌ಸಿ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಎವಿಎಂ ಅಕಾಡೆಮಿಯ ಸಹಯೋಗದಲ್ಲಿ ತಾಲೂಕಿನ 41 ಗ್ರಾಮಪಂಚಾಯಿತಿ ವ್ಯಾಪ್ತಿಯ 41 ಗಣಿತ ಶಿಕ್ಷಕರಿಗೆ ವೇದ ಗಣಿತದ ಬಗ್ಗೆ ತರಬೇತಿ ನೀಡುವ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವೇದಗಣಿತವು ಮಕ್ಕಳಲ್ಲಿ ಸಂಖ್ಯಾಜ್ಞಾನ ಮತ್ತು ವ್ಯವಹಾರಿಕ ಗಣಿತ ನಿರ್ವಹಿಸಲು ಸಹಕಾರಿಯಾಗಿದ್ದು, ಶಿಕ್ಷಕರು ವೇದಗಣಿತದ ಬಗ್ಗೆ ಸಮಗ್ರ ಮಾಹಿತಿ ಪಡೆದು ಮಕ್ಕಳಿಗೆ ಬೋಧಿಸುವಂತೆ ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್ ಮಾತನಾಡಿ, ವಿಶ್ವದಲ್ಲಿ ಗಣಿತಕ್ಕೆ ಭಾರತೀಯರ ಕೊಡುಗೆ ಅನನ್ಯ. ಶೂನ್ಯದ ಪರಿಕಲ್ಪನೆ ನೀಡಿದ ಭಾರತದಲ್ಲಿ ನಾವು ಪುರಾತನ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಅಕಾಡೆಮಿಯ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರಸ್ವಾಮಿ ಮತ್ತು ಶಿವಣ್ಣ ವೇದಗಣಿತದ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು. ಅಕಾಡೆಮಿ ಸಂಯೋಜಕ ಕೋದಂಡರಾಮ, ಸೋಮಶೇಖರ ಬಾಬು, ನಾಗೇಂದ್ರ ಹಾಜರಿದ್ದರು.