ಎನ್.ಆರ್.ಪುರ: ಸಂಜೀವಿನಿ ಒಕ್ಕೂಟದಿಂದ ನಡೆಯುತ್ತಿರುವ ಮಾಸಿಕ ಸಂತೆಯು ಪ್ರತಿ ವಾರಕ್ಕೊಮ್ಮೆ ನಡೆಯಬೇಕು ಎಂದು ತಾಪಂಯ ಕೃಷಿಯೇತರ ಚಟುವಟಿಕೆಯ ವ್ಯವಸ್ಥಾಪಕಿ ಕೆ.ಎಸ್.ವಿನುತಾ ಸಲಹೆ ನೀಡಿದರು.
ತಾಲೂಕಿನ ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಾನೂರು ಸಂಜೀವಿನಿ ಒಕ್ಕೂಟ ಹಾಗೂ ಕಾನೂರು ಗ್ರಾಪಂ ಆಶ್ರಯದಲ್ಲಿ ನಡೆದ ಮಾಸಿಕ ಸಂತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ವಿವಿಧ ಬಗೆಯ ಉತ್ಪನ್ನಗಳ ಮಾರಾಟಕ್ಕೆ ಈ ಮಾಸಿಕ ಸಂತೆ ಅನುಕೂಲವಾಗಲಿದೆ. ಮಹಿಳೆಯರು ವಿಭಿನ್ನ ವಸ್ತುಗಳನ್ನು ತಯಾರಿಸಬೇಕು. ಗುಣಮಟ್ಟ ಕಾಪಾಡಬೇಕು. ಅದನ್ನು ಗ್ರಾಹಕರಿಗೆ ನೀಡುವಾಗ ಉತ್ತಮ ಪ್ಯಾಕಿಂಗ್ ಮಾಡಬೇಕು. ಆಗ ಮಾತ್ರ ಜನರಿಗೆ ತಲುಪಲು ಸಾಧ್ಯ ಎಂದರು.
ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜುನಾಥಗೌಡ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಸಂಜೀವಿನಿ ಯೋಜನೆಯ ಸೌಲಭ್ಯ ಪಡೆದು ಸ್ವಉದ್ಯೋಗ ಕೈಗೊಂಡು ಆರ್ಥಿಕ ಸಬಲರಾಗಬೇಕು ಎಂದು ತಿಳಿಸಿದರು. ಕಾನೂರು ಗ್ರಾಪಂ ಅಧ್ಯಕ್ಷ ವಿಜಯಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನಂದಿನಿ, ಗ್ರಾಪಂ ಸದಸ್ಯರಾದ ರತ್ನಾಕರ, ವಿಶಾಂತಿ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶೀಬಾ, ಖಜಾಂಚಿ ಶ್ವೇತಾ, ಪಶುಸಖಿ ಅಮೃತಾ, ಕೃಷಿ ಸಖಿ ಕೀರ್ತಿ, ಪಿ ಕವನಾ, ಎಂ.ಬಿ.ಕೆ.ಲತಾ, ಎಲ್.ಸಿ.ಆರ್.ಪಿ.ಗಳಾದ ಅಮೃತಾ, ಸಂಧ್ಯಾ ಮತ್ತಿತರರಿದ್ದರು.