ನ್ಯೂಸ್

ಮಾವುತರು, ಕಾವಾಡಿಗಳ ಸೇವೆ ಅನನ್ಯ

ಕಾಡಾನೆ ಸೆರೆ, ಹುಲಿ ಮತ್ತು ಚಿರತೆಯಂತಹ ವನ್ಯಜೀವಿಗಳ ಸೆರೆ ಕಾರ್ಯಾಚರಣೆಗೆ ಸಾಕಾನೆಗಳು ಬಹುಮುಖ್ಯ. ಆನೆ ಪಳಗಿಸುವ ಕಲೆಯನ್ನು ವಂಶಪಾರಂಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಮೆಚ್ಚುಗೆವ್ಯಕ್ತಪಡಿಸಿದರು.

ಮೈಸೂರು ಅರಮನೆಯಲ್ಲಿ ಸೋಮವಾರ ಜಂಬೂಸವಾರಿಯ ಪ್ರಧಾನ ಆಕರ್ಷಣೆಯಾದ ದಸರಾ ಆನೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಾವುತರು ಮತ್ತು ಕಾವಾಡಿಗಳು ಹಾಗೂ ಚಿರತೆ ಕಾರ್ಯಪಡೆ ಸಿಬ್ಬಂದಿಗೆ ಬ್ಯಾಗ್, ಬಟ್ಟೆ ಸೇರಿದಂತೆ ಅಗತ್ಯ ಸಾಮಗ್ರಿ ಕಿಟ್ ವಿತರಿಸಿ ಮಾತನಾಡಿದರು.

ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣದಲ್ಲಿ ಮಾವುತರು ಮತ್ತು ಕಾವಾಡಿಗಳ ಪಾತ್ರ ಮಹತ್ವದ್ದಾಗಿದೆ. ಮಾವುತರು ಮತ್ತು ಕಾವಾಡಿಗಳಿಗೆ ಆನೆಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ, ನಿಯಂತ್ರಿಸುವ, ಪಾಲನೆ ಹಾಗೂ ಪೋಷಣೆ ಮಾಡುವ ಕಲೆ ರಕ್ತಗತವಾಗಿ ಬಂದಿದೆ. ಇಡೀ ದೇಶದಲ್ಲಿಯೇ ಆನೆಗಳನ್ನು ಪಳಗಿಸುವಲ್ಲಿ ಕರ್ನಾಟಕದ ಮಾವುತ ಮತ್ತು ಕಾವಾಡಿಗಳಿಗೆ ವಿಶೇಷ ಕೌಶಲವಿದೆ. ಹೀಗಾಗಿಯೇ ನೆರೆಯ ಆಂಧ್ರಪ್ರದೇಶ, ಗೋವಾ ಮೊದಲಾದ ರಾಜ್ಯಗಳು ಸಹ ಕುಮ್ಕಿ ಆನೆಯ ಸಹಾಯಕ್ಕೆ ರಾಜ್ಯಕ್ಕೆ ಮನವಿ ಮಾಡುತ್ತಿವೆ ಎಂದರು.

ರಾಜ್ಯದ ಮಾವುತರು ಹಾಗೂ ಕಾವಾಡಿಗಳಿಗೆ ವಂಶಪಾರಂಪರ್ಯವಾಗಿ ಕೌಶಲ ಇದ್ದರೂ, ಅವರಿಗೆ ತಜ್ಞರಿಂದ ವೃತ್ತಿ ತರಬೇತಿಯನ್ನೂ ಕೊಡಿಸಲಾಗುತ್ತಿದ್ದು, ಇದು ಅವರ ನೈಪುಣ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಮಾವುತರು, ಕಾವಾಡಿಗಳ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಈ ಭಾಗದಲ್ಲಿ 218 ಆನೆಗಳ ಪಾಲನೆಯಲ್ಲಿ ತೊಡಗಿದ್ದು, ಅವರ ವೇತನ ಹೆಚ್ಚಳಕ್ಕೆ ಬಹಳ ವರ್ಷದಿಂದ ಒತ್ತಾಯ ಕೇಳಿಬರುತ್ತಿದೆ. ಮಾವುತ ಮತ್ತು ಕಾವಾಡಿಗಳ ವೇತನವನ್ನು ಡಿಆರ್‌ಎಫ್‌ಒ ವೇತನ ಶ್ರೇಣಿಗೆ ಏರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.