ವಿಜಯವಾಣಿ ಸುದ್ದಿಜಾಲ ಕೋಲಾರ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾರ್ಚ್ ವೇಳೆಗೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ ಬಾಗೇವಾಡಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುವರು. ಕಾರ್ಯಕ್ರಮವನ್ನು ಮಾರ್ಚ್ ಒಳಗಾಗಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಮ್ಮೇಳನ ನಡೆಯುವ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲು ಸೂಚಿಸಿದರು.
ಸರ್ಕಾರದ ವಿವಿಧ ೩೫ ಯೋಜನೆಗಳಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿ ತಯಾರಿಸಿ ಸಮಾವೇಶಕ್ಕೆ ಫಲಾನುಭವಿಗಳಿಗೆ ಕರೆ ತರುವ ವ್ಯವಸ್ಥೆ ಇಲಾಖೆವಾರು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಅವಶ್ಯಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳನ್ನು ಕರೆತಂದು ಆಯೋಜಿಸಲಾಗುವುದು. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಫಲಾನುಭವಿಗಳಿಗೆ ನೀಡಲಾಗುವುದು. ಪ್ರತಿ ಇಲಾಖೆಯವರು ಫಲಾನುಭವಿಗಳನ್ನು ಕರೆತರಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮ ಪಂಚಾಯಿತಿಯ ಫಲಾನುಭವಿಗಳನ್ನು ಕರೆತರಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಶಿಷ್ಟಾಚಾರ ಅನ್ವಯ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ಮೈತ್ರಿ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ ೦೧ ಕೆ.ಎಲ್.ಆರ್. ೦೪ : ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ ಬಾಗೇವಾಡಿ, ಎ.ಸಿ.ಡಾ.ಮೈತ್ರಿ, ಉಪಕಾರ್ಯದರ್ಶಿ ಬಿ.ಶಿವಕುಮಾರ್ ಮುಂತಾದವರಿದ್ದರು.