ನ್ಯೂಸ್

ಮಾರ್ಗಸೂಚಿ ಪಾಲಿಸಲು ಜಾಗೃತಿ ಮೂಡಿಸಿ: ಅಧಿಕಾರಿಗಳಿಗೆ ಸಂಸದ ಡಿ.ಕೆ.ಸುರೇಶ್ ಸೂಚನೆ ಕನಕಪುರದಲ್ಲಿ ಕರೊನಾ ಟಾಸ್ಕ್‌ಫೋರ್ಸ್ ಸಭೆ

ಕನಕಪುರ : ಕರೊನಾ 2ನೇ ಅಲೆಯಿಂದ ಜನರು ಭೀತಿಯಿಂದ ಬದುಕು ಸಾಗಿಸುವಂತಾಗಿದೆ. ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತಾಲೂಕು ಆಡಳಿತ ಶಕ್ತಿಮೀರಿ ಪ್ರಯತ್ನಿಸುವುದರ ಜತೆಗೆ ರೋಗದ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಸಂಸದ

ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕರೊನಾ ಟಾಸ್ಕ್‌ಫೋರ್ಸ್ ಹಾಗೂ ತಾಲೂಕು ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರೊನಾ ಮೊದಲ ಅಲೆ ತಾಲೂಕಿನ ಜನತೆಯನ್ನು ಹೆಚ್ಚು ಬಾಧಿಸಿರಲಿಲ್ಲ. ಆದರೆ, 2ನೇ ಅಲೆ ಇಡೀ ತಾಲೂಕಿನಾದ್ಯಂತ ಹರಡುವುದರ ಮೂಲಕ ಅಪಾರ ಸಾವು-ನೋವಿಗೆ ಕಾರಣವಾಗುತ್ತಿದೆ. ಇದಕ್ಕೆ ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ನಿರ್ಲಕ್ಷ್ಯವೇ ಕಾರಣ. ಟಾಸ್ಕ್‌ಫೋರ್ಸ್ ಕಮಿಟಿ ಸದಸ್ಯರು, ಅಧಿಕಾರಿಗಳು ರೋಗ ನಿಯಂತ್ರಿಸಲು ಶ್ರಮಿಸುವ ಜತೆಗೆ ಸಾರ್ವಜನಿಕರಿಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಚಾರದ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭಾಧ್ಯಕ್ಷ ಮಹಮದ್ ಮಕ್ಬೂಲ್‌ಪಾಷ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಲ್.ಮಧು, ಸರ್ಕಲ್ ಇನ್ಸ್‌ಪೆಕ್ಟರ್ ಟಿಟಿ ಕೃಷ್ಣ, ತಾಲೂಕು ವೈದ್ಯಾಧಿಕಾರಿ ಡಾ.ನಂದಿನಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.