ಶಿವಮೊಗ್ಗ: ನಗರದ ಹೊರವಲಯದ ಹರಿಗೆ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಮಾರ್ಕೆಟ್ ಲೋಕಿ ಸಹಚರ ಕುಖ್ಯಾತ ರೌಡಿ ಸೈನಾದಿ ಲಕ್ಷ್ಮಣ್ ಮೇಲೆ ಬುಧವಾರ ಪೊಲೀಸರು ಗುಂಡು ಹಾರಿಸಿದ್ದಾರೆ.
ಮಾರ್ಕೆಟ್ ಗಿರಿ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ಸೆರೆಯಾಗಿದ್ದ ಸೈನಾದಿ ಲಕ್ಷ್ಮಣ್‌ನನ್ನು ಶಿವಮೊಗ್ಗಕ್ಕೆ ಕರೆತರುವಾಗ ಪೊಲೀಸರು ಫೈರಿಂಗ್ ನಡೆಸಿದ್ದು, ಬಲಗಾಲಿಗೆ ಗುಂಡೇಟು ತಗುಲಿದೆ.
ಹರಿಗೆ ಬಳಿ ಮೂಲ ವಿಸರ್ಜನೆಗೆಂದು ನಿಲ್ಲಿಸಿದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೈಬರ್ ಕ್ರೈಂನ ಸಿಪಿಐ ಕೆ.ಟಿ.ಗುರುರಾಜ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುಖ್ಯ ಪೇದೆ ಹರ್ಷ ಎಂಬುವರಿಗೆ ಗಂಭೀರ ಪೆಟ್ಟು ಬಿದ್ದಿದೆ.
ಮೆಂಟಲ್ ಸೀನಾ, ಮೋಟಿ ವೆಂಕಟೇಶ್ ಕೊಲೆಗೆ ಮಾರ್ಕೆಟ್ ಲೋಕಿ ಜತೆ ಕೈ ಜೋಡಿಸಿದ್ದ ಸೈನಾದಿ ಲಕ್ಷ್ಮಣ್, ಮಾರ್ಕೆಟ್‌ಗಿರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತದನಂತರ ತಲೆಮರೆಸಿಕೊಂಡಿದ್ದ.