ತಿ.ನರಸೀಪುರದ ವಿದ್ಯೋದಯ ಕಾಲೇಜು ಆವರಣದದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. 
ನ್ಯೂಸ್

ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ದೈಹಿಕ ಕಸರತ್ತು ನಡೆಸಿ


ಸರ್ಕಾರಿ ನೌಕರರಿಗೆ ತಹಸೀಲ್ದಾರ್ ಸಿ.ಜಿ.ಗೀತಾ ಸಲಹೆ


ತಿ.ನರಸೀಪುರ: ಕೆಲಸದ ಒತ್ತಡದಿಂದಾಗಿ ಸರ್ಕಾರಿ ನೌಕರರು ಮಾನಸಿಕ ಒತ್ತಡಕ್ಕೊಳಗಾಗಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಹೆಚ್ಚಿನ ದೈಹಿಕ ಕಸರತ್ತು ನಡೆಸಬೇಕು ಎಂದು ತಹಸೀಲ್ದಾರ್ ಸಿ.ಜಿ.ಗೀತಾ ಸಲಹೆ ನೀಡಿದರು.


ಪಟ್ಟಣದ ವಿದ್ಯೋದಯ ಕಾಲೇಜಿನ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.


ಕೆಲಸದ ಒತ್ತಡದಿಂದ ಸರ್ಕಾರಿ ನೌಕರರು ಮಾನಸಿಕವಾಗಿ ಕ್ಷೋಭೆಗೆ ಒಳಗಾಗುತ್ತಾರೆ. ಜತೆಗೆ ದೈಹಿಕ ಕಾಳಜಿ ಇಲ್ಲದೆ ಜೀವನವನ್ನು ಯಾಂತ್ರಿಕ ಬದುಕನ್ನಾಗಿಸಿಕೊಂಡಿದ್ದಾರೆ. ಆದ್ದರಿಂದ ನೌಕರರು ವೈಯಕ್ತಿಕ ಜೀವನದ ಕಡೆಗೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿದರು. ಕ್ರೀಡಾಕೂಟದಲ್ಲಿ ತಾಲೂಕಿನ ಎಲ್ಲ ಶಿಕ್ಷಕ ಮತ್ತು ಶಿಕ್ಷಕಿಯರು ಭಾಗವಹಿಸಿದ್ದರು. ಗುಂಡು ಎಸೆತ, ಕ್ರಿಕೆಟ್, ವಾಲಿಬಾಲ್ ಮತ್ತು ಇತರ ಕ್ರೀಡೆಗಳನ್ನು ನಡೆಸಲಾಯಿತು.


ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರ್ ಮೂರ್ತಿ,ಉಪಾಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ಸುಬ್ರಹ್ಮಣ್ಯ, ಖಜಾಂಚಿ ವೆಂಕಟಶೆಟ್ಟಿ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ಮಾದಪ್ಪ, ಕುಪ್ಯಾ ಪುಟ್ಟಸ್ವಾಮಿ, ತಲಕಾಡು ಟಿ.ಎನ್.ನಾಗೇಂದ್ರ, ವಿಶ್ವನಾಥರೆಡ್ಡಿ, ಎಂ. ಆರ್.ಮಂಜುಳಾ, ಆರ್.ಹೇಮಾ, ಪೂರ್ಣಿಮಾ, ಭಾಗ್ಯಮ್ಮ, ಸೋಸಲೆ ನಾಗೇಶ್, ಪ್ರಕಾಶ್, ಕೆಂಗಣ್ಣಸ್ವಾಮಿ ಹಾಜರಿದ್ದರು.