ರಾಮನಗರ : ದಿನದಿಂದ ದಿನಕ್ಕೆ ಶೋಷಣೆ ಹೆಚ್ಚಾಗುತ್ತಿದ್ದು, ಖಿನ್ನತೆ, ಆತಂಕ, ಆತ್ಮಹತ್ಯೆ ಆಲೋಚನೆಗಳು, ಅತಿಯಾದ ಒತ್ತಡ ಹೀಗೆ ಹಲವಾರು ಕಾರಣಗಳಿಂದ ಮಾನಸಿಕ ಸಮಸ್ಯೆಗಳು ಬಾಧಿಸುತ್ತಿವೆ ಎಂದು ಮನೋರೋಗ ತಜ್ಞ ಮತ್ತು ನಿಮ್ಹಾನ್ಸ್‌ನ ನಿವೃತ್ತ ಪ್ರಾಧ್ಯಾಪಕ
ಡಾ. ಸಿ.ಆರ್. ಚಂದ್ರಶೇಖರ್ ನುಡಿದರು.
ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ರಾಮನಗರ ಇವರ ಸಹಯೋಗದೊಂದಿಗೆ ‘ಅಸಮಾನ ಜಗತ್ತಿನಲ್ಲಿ ಮಾನಸಿಕ ಸ್ವಾಸ್ಥ್ಯ’ ಎಂಬ ಘೋಷವಾಕ್ಯದಡಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಸಮಸ್ಯೆಗಳನ್ನು ಇತರರಲ್ಲಿ ಹಂಚಿಕೊಳ್ಳುವುದು, ಯೋಗ, ಧ್ಯಾನ, ಸಂಗೀತ ಕೇಳುವ ಅಭ್ಯಾಸ ಮಾಡಿಕೊಳ್ಳುವುದು, ನಕಾರಾತ್ಮಕ ವಿಷಯಗಳಿಂದ ದೂರವಿರುವುದು ಮತ್ತು ಸಕಾರಾತ್ಮಕ ವಿಷಯಗಳಿಗೆ ಒತ್ತು ನೀಡುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ಮನೋರೋಗ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ ಎಂದು ತಿಳಿಸಿದರು.
ಡಾ. ಮಂಜುನಾಥ್ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರೂ ಹೆಚ್ಚು ಒತ್ತಡದ ಬದುಕಿನಿಂದಾಗಿ ಹಲವಾರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದು, ತಮಗೆ ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಮನೋರೋಗ ತಜ್ಞರನ್ನು
ಭೇಟಿ ಮಾಡಿ ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ತಿಳಿಹೇಳಿ ಮತ್ತು ಪಾಲಕರು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ನಿಗಾವಹಿಸಿ. ಈ ಮೂಲಕ ಮಕ್ಕಳಲ್ಲಿ ಉಜ್ವಲ ಭವಿಷ್ಯ ರೂಪಿಸಿ ಎಂದರು.
ಮನೋರೋಗ ತಜ್ಞ ಡಾ. ಎ.ಎಂ. ಆದರ್ಶ, ಮಾತನಾಡಿ, ರಾಮನಗರ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಶಿಬಿರ ನಡೆಸಲಾಗುವುದು ಮತ್ತು ಪ್ರತಿದಿನ ಜಿಲ್ಲಾ ಆಸ್ಪತ್ರೆಯಲ್ಲಿ ಮನೋರೋಗ ತಜ್ಞರು ಲಭ್ಯವಿರುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ.ಜಿ.ಎಲ್. ಪದ್ಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಿರಣ್ ಶಂಕರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕೆ.ಕುಮಾರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ಕೆ.ಮಂಜುಳ ಹಾಗೂ ಆರೋಗ್ಯ ಇಲಾಖೆ, ಕೆಎಸ್‌ಪಿಟಿಎಸ್ ಚನ್ನಪಟ್ಟಣದ
ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.