ಹುಣಸೂರು ನಗರದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹೆಚ್ಚುವರಿ ಪೂಜಾ ಬೆಳಕೆರಿ ಉದ್ಘಾಟಿಸಿದರು. ಎಸ್.ರೇವಣ್ಣ, ಡಾ.ಕೀರ್ತಿಕುಮಾರ್, ಎಸ್.ರಮೇಶ್, ರಾಜೇಶ್ವರಿ ಇತರರಿದ್ದರು.  
ನ್ಯೂಸ್

ಮಾನಸಿಕ ದುರ್ಬಲತೆಗೆ ತಳ್ಳಿದೆ ಒತ್ತಡದ ಬದುಕು

ಹುಣಸೂರು: ನಿರಂತರ ಕ್ರಿಯಾಶೀಲತೆಯಿಂದ ಇದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪೂಜಾ ಬೆಳಕೆರಿ ಅಭಿಪ್ರಾಯಪಟ್ಟರು.

ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಮಾನಸಿಕ ಆರೋಗ್ಯ ದಿನಾಚರಣೆ, ವಿಶ್ವ ರೇಬಿಸ್ ದಿನಾಚರಣೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನಶೈಲಿ, ಒತ್ತಡದ ಬದುಕು ಮತ್ತು ಸ್ಪರ್ಧಾತ್ಮಕ ಯುಗವು ನಮ್ಮನ್ನು ಮಾನಸಿಕ ಮತ್ತು ದೈಹಿಕ ದುರ್ಬಲತೆಗೆ ತಳ್ಳಿದೆ. ಸಕಾರಾತ್ಮಕ ಶಿಕ್ಷಣ, ಯೋಗ, ಧ್ಯಾನದಂತಹ ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಣಿತರು ತಿಳಿಸುತ್ತಾರೆ. ಆದರೆ, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವಲ್ಲಿ ಎಡವುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದು, ಸವಾಲನ್ನು ಸಕಾರಾತ್ಮಕವಾಗಿ ಎದುರಿಸುವುದು ಹಾಗೂ ಸದಾ ಕ್ರಿಯಾಶೀಲರಾಗಿರುವ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ ಮಾತನಾಡಿದರು. ನಗರದ ಸಾರ್ವಜನಿಕ ಆಸ್ಪತ್ರೆಯ ಚರ್ಮರೋಗತಜ್ಞ ಡಾ.ಕೆ.ಪಿ. ಯೋಗೇಶ್ ಕುಮಾರ್ ರೇಬಿಸ್ ನಿಯಂತ್ರಣದ ಕುರಿತು ಹಾಗೂ ಮಾನಸಿಕ ರೋಗ ತಜ್ಞೆ ಡಾ.ಬಿ.ಸಿ.ಸುದೀಪ್ತಿ ಮಾನಸಿಕ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶಾಲೆಯ ಮುಖ್ಯಶಿಕ್ಷಕ ಎಸ್.ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ವಿಶ್ವನಾಥ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಪಿ.ಸುಂದರೇಶ್, ಶಿಕ್ಷಕ ಶಿವಸ್ವಾಮಿ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.