ಮೈಸೂರು : ಮಾನಸಿಕ ಅಸುಖವನ್ನು ಕಡೆಗಣಿಸದಿರಿ ಎಂದು ಅಮೆರಿಕದ ಓಕ್ಲಹಾಮಾ ವಿಶ್ವವಿದ್ಯಾನಿಲಯದ ಕಮ್ಯೂನಿಕೇಷನ್ ಸೈನ್ಸ್ ಆ್ಯಂಡ್ ಡಿಸಾರ್ಡರ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಎಸ್.ಲಕ್ಷ್ಮೀ ವಿದ್ಯಾರ್ಥಿಗಳಿಗ ಕಿವಿಮಾತು ಹೇಳಿದರು.
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಆಪ್ತ ಸಮಾಲೋಚನಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಮಾನಸಿಕ ಸ್ವಾಸ್ಥ್ಯಕ್ಕಾಗಿ ಆಪ್ತ ಸಮಾಲೋಚನೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಯುವ ಸಮುದಾಯ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಅಸುಖ. ಮುಖ್ಯವಾಗಿ ಮಾನಸಿಕ ಅಸುಖವಾಗಿದೆ. ಆಧುನಿಕ ಜೀವನಶೈಲಿಗೆ ಮಾರುಹೋಗಿರುವುದು, ಒತ್ತಡಗಳ ನಡುವಿನ ಜೀವನ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಎಲ್ಲವೂ ಯುವ ಸಮುದಾಯದಲ್ಲಿ ಮಾನಸಿಕ ಅಸುಖವನ್ನು ನೀಡುತ್ತಿದೆ ಎಂದರು.
ಮಾನಸಿಕ ಅಸುಖಕ್ಕೆ ಒಳಗಾದವರು ಖಿನ್ನತೆ, ಬದಲಾವಣೆಗೆ ಹೊಂದಾಣಿಕೆ ಆಗದೇ ಇರುವುದು, ಸ್ವಹಾನಿಯಂತಹ ಅನಾಹುತಗಳನ್ನು ನಿರ್ಧರಿಸುತ್ತಾರೆ. ಸಮಸ್ಯೆಗೆ ಪರಿಹಾರ ಎನ್ನುವುದೇ ಇಲ್ಲ ಎನ್ನುವ ಮನೋಭಾವನೆಯನ್ನು ದೂರಗೊಳಿಸಿ. ಆಪ್ತ ಸಮಾಲೋಚಕರ ಸಲಹೆ ಮತ್ತು ಸಹಾಯ ಪಡೆಯಿರಿ ಎಂದು ಸಲಹೆ ನೀಡಿದರು.
ಸಿಡಿಸಿ ಉಪಾಧ್ಯಕ್ಷ ಮೋದೂರು ಮಹೇಶ್ ಆರಾಧ್ಯ ಮಾತನಾಡಿ, ಸಹಜ ಜೀವನ ಪಾಲನೆಯೊಂದೇ ಈ ಎಲ್ಲ ಸಮಸ್ಯೆಗಳಿಗೆ ಉತ್ತರವಾಗುತ್ತದೆ. ವಯೋಸಹಜ ಆಸೆಗಳಿರುವುದು ಸಹಜ. ಆದರೆ ಅತಿಯಾಸೆ ಎಲ್ಲ ಸಮಸ್ಯೆಗಳಿಗೂ ಮೂಲ ಎನ್ನುವುದನ್ನು ನಾವೆಲ್ಲರೂ ಮರೆಯಬಾರದು ಎಂದರು.
ಕಾರ್ಯಕ್ರಮವನ್ನು ಪ್ರಾಂಶುಪಾಲ ಪುಟ್ಟಶೆಟ್ಟಿ ಉದ್ಘಾಟಿಸಿದರು. ಆಪ್ತ ಸಮಾಲೋಚನಾ ಸಮಿತಿ ಸಂಚಾಲಕಿ ಡಾ.ಕಲಾಶ್ರೀ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕರಾದ ಡಾ.ನಂಜುಂಡಸ್ವಾಮಿ, ಡಾ.ರಮಣಿನಾಯ್ಕ, ಕೆ.ಎಂ.ಸಿ.ಲಕ್ಷ್ಮಯ್ಯ, ರಜಿಯಾ ಸುಲ್ತಾನಾ, ಡಾ.ಕಾವ್ಯಾ, ಡಾ.ಎಚ್.ಆರ್.ವಿಶ್ವನಾಥ್ ಹಾಜರಿದ್ದರು.