ಚಿಕ್ಕಮಗಳೂರು: ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಏಕೆಂದರೆ ಶೇ.99 ಅಪಘಾತಗಳು ಮಾನವನ ತಪ್ಪಿನಿಂದಲೇ ನಡೆಯುತ್ತಿವೆ. ಹಾಗಾಗಿ ಸುರಕ್ಷಿತ ವಾಹನ ಸಂಚಾರಕ್ಕೆ ಮುಂದಾಗಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕಿ ರಮ್ಯಾ ತಿಳಿಸಿದರು.
ನಗರದ ತೇಗೂರು ಸಮೀಪದ ಲೈಫ್‌ಲೈನ್ಸ್ ಫೀಡ್ಸ್‌ನಲ್ಲಿ ವಾಹನ ಚಾಲಕರಿಗೆ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಯಮ ಪಾಲಿಸದೆ ವಾಹನ ಚಾಲನೆ ಮಾಡಿದಾಗ ಅಮಾಯಕರು ಜೀವ ಕಳೆದುಕೊಂಡು ಅವರ ಕುಟುಂಬದವರು ಬೀದಿಪಾಲಾಗುತ್ತಿದ್ದಾರೆ. ಹೀಗಾಗಿ ಚಾಲಕರು ಅತ್ಯಂತ ಜಾಗರೂಕವಾಗಿರಬೇಕು. ಮನುಷ್ಯನ ಅಥವಾ ಪ್ರಾಣಿಯದ್ದೇ ಆದರೂ ಜೀವ ಮುಖ್ಯ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.
ರಸ್ತೆ ಸುರಕ್ಷತಾ ವಿಚಾರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಜೀವಕ್ಕೂ ಬೆಲೆಯಿದೆ ಎನ್ನುವ ವಾಸ್ತವವನ್ನು ಅರಿತುಕೊಂಡು ವಾಹನ ಚಲಾಯಿಸಬೇಕು. ವಾಹನ ಚಾಲಕರು ದಾಖಲೆಗಳಿಲ್ಲದೆ ರಸ್ತೆಗೆ ವಾಹನ ತರಬಾರದು. ಚಾಲನಾ ಪರವಾನಗಿ, ಆರ್‌ಸಿ, ವಿಮೆ ದಾಖಲೆ ಮತ್ತಿತರ ವಿವರಗಳನ್ನು ಹೊಂದಿರುವುದು ಕಡ್ಡಾಯ. ಕಾನೂನಿಗೆ ಮಿಗಿಲಾದದ್ದು ಯಾವುದೂ ಇಲ್ಲ. ಹೀಗಾಗಿ ನಿಯಮಗಳು ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ರಸ್ತೆ ಸುರಕ್ಷತೆಯ ಮಾಹಿತಿಯುಳ್ಳ ಕೈಪಿಡಿಯನ್ನು ವಿತರಿಸಲಾಯಿತು. ಆರ್‌ಟಿಒ ಕಚೇರಿ ಪ್ರಥಮದರ್ಜೆ ಸಹಾಯಕ ರವಿಕಿರಣ್ ರಸ್ತೆ ಸುರಕ್ಷತೆ ಬಗ್ಗೆ ಉಪನ್ಯಾಸ ನೀಡಿದರು. ಆರ್‌ಟಿಒ ಕಚೇರಿ ಸಿಬ್ಬಂದಿ ಲೋಹಿತ್, ಹರೀಶ್, ಸಂತೋಷ್, ಲೈಫ್‌ಲೈನ್ ಫೀಡ್ಸ್‌ನ ಕಾಂತರಾಜು, ಸತೀಶ್ ಇತರರಿದ್ದರು.