ವಿಜಯವಾಣಿ ಸುದ್ದಿಜಾಲ ಗದಗ
ದೇಶ ಆಧುನಿಕವಾಗಿ ಸಾಕಷ್ಟು ಮುಂದುವರಿದಿದ್ದರೂ ಸಹ ಇನ್ನೂ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ನಡೆಯುತ್ತಿರುವದು ವಿಷಾದಕರ ಸಂಗತಿ. ಈ ಮಾನವ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸಲು ಎಲ್ಲರೂ ಮುಂದಾಗೋಣ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಕುರುಬೇಟ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿದ್ದರು ಹೆಣ್ಣಿನ ಮೇಲೆ ನಿರಂತರ ಶೋಷಣೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಮೂಲಕ ಮಾನವ ಕಳ್ಳ ಸಾಗಾಣಿಕೆ ಸಂಗತಿ ಅತ್ಯಂತ ಕಳವಳಕಾರಿಯಾಗಿದೆ ಎಂದರು.
ವಿಶ್ವ ಸಂಸ್ಥೆಯಿಂದ ಜುಲೈ 31 ಮಾನವ ಕಳ್ಳ ಸಾಗಾಣಿಕೆ ನಿಯಂತ್ರಣಕ್ಕಾಗಿ ಹಾಗೂ ನಿಷೇಧಕ್ಕಾಗಿ ಮಾನವ ಕಳ್ಳ ಸಾಗಾಣಿಕೆ ದಿನಾಚರಣೆ ಆಚರಣೆಗೆ ತರಲಾಗಿದೆ. ಈ ಮೂಲಕ ಪ್ರತಿಯೊಬ್ಬರಲ್ಲಿಯೂ ಮಾನವ ಕಳ್ಳ ಸಾಗಾಣಿಕೆ ಕುರಿತು ಅರಿವು ಮೂಡಿಸುವ ಮೂಲಕ ಸಂಪೂರ್ಣ ನಿಯಂತ್ರಣಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.
ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಾಣಿಕೆ ಯಾವ ಯಾವ ಹಂತದಲ್ಲಿ ನಡೆಯುತ್ತದೆ. ಮಾನವ ಕಳ್ಳ ಸಾಗಾಣಿಕೆ ಮಾಡಿದಲ್ಲಿ ಇರುವ ಕಠಿಣ ಶಿಕ್ಷೆ ಹಾಗೂ ದಂಡದ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎಂದರು.
ಮಾನವ ಕಳ್ಳ ಸಾಗಾಣಿಕೆ ತಡೆಯುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ವಣಕ್ಕೆ ಎಲ್ಲರೂ ಕೈಜೋಡಿಸೋಣ ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಯುವ ಪೀಳಿಗೆ ಇದ್ದು ಅವರಿಗೆ ಸೂಕ್ತ ತಿಳಿವಳಿಕೆ ನೀಡುವ ಮೂಲಕ ಮಾನವ ಕಳ್ಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಟಿಬದ್ಧರಾಗೋಣ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ ಮಾತನಾಡಿ, ತಂತ್ರಜ್ಞಾನವು ಸದ್ಬಳಕೆ ಹಾಗೂ ದುರ್ಬಳಕೆ ಎರಡೂ ತರಹ ಆಗುತ್ತಿದೆ. ಲೈಂಗಿಕ ಶೋಷಣೆಯಾದಲ್ಲಿ ಅತ್ಯಂತ ಕಠಿಣವಾದ ಪೋಕ್ಸೋ ಕಾಯ್ದೆ ಹಾಕುವ ಮೂಲಕ ಪ್ರಕರಣವನ್ನು ನಡೆಸಲಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಬೇಕು ಹಾಗೂ ಸ್ವಸ್ಥ ಸಮಾಜಕ್ಕೆ ಕೈ ಜೋಡಿಸಬೇಕೆಂದರು.
ಪೊಲೀಸ್ ಇಲಾಖೆಯ ಎಂ.ಎಫ್.ಅಸೂಟಿ ಮಾತನಾಡಿ, ಅನಾದಿಕಾಲದ ಇತಿಹಾಸದಿಂದಲೂ ನಡೆದುಕೊಂಡ ಬಂದ ವಿಚಿತ್ರ ಪಿಡುಗು ಈ ಮಾನವ ಕಳ್ಳಸಾಗಾಣಿಕೆಯಾಗಿದೆ. ದೇಶವು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಹಂತದಲ್ಲಿದ್ದರೂ ಸಹ ಇಂದಿಗೂ ಈ ಪಿಡುಗು ಇದೆ. ಪ್ರಪಂಚದಲ್ಲಿ ಭಾರತ ದೇಶವು ಮಾನವ ಕಳ್ಳ ಸಾಗಾಣಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ರಾಜ್ಯವು ಐದನೇ ಸ್ಥಾನದಲ್ಲಿದೆ. ಈ ಮೂಲಕ ಮಾನವ ಕಳ್ಳ ಸಾಗಾಣಿಕೆ ಇನ್ನೂ ಇದೇ ಎಂಬುದು ಅಂಕಿ ಅಂಶಗಳ ಮೂಲಕ ಕಂಡುಬರುತ್ತಿದೆ ಎಂದರು.
ಮಾನವ ಕಳ್ಳ ಸಾಗಾಣಿಕೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಸರ್ಕಾರವು ಉಚಿತ ಸಹಾಯವಾಣಿಗಳನ್ನು ನೀಡಿದ್ದು ಅವುಗಳಿಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಮಾನವ ಕಳ್ಳ ಸಾಗಾಣಿಕೆ ನಿಯಂತ್ರಣದಲ್ಲಿ ಕೈಜೋಡಿಸಬೇಕು. ಮಹಿಳೆಯರ ಸಹಾಯವಾಣಿ ಸಂಖ್ಯೆ 181, ಮಕ್ಕಳ ಸಹಾಯವಾಣಿ ಸಂಖ್ಯೆ 1098, ಅದೇ ರೀತಿ ಎಲ್ಲ ತರಹದ ಪ್ರಕರಣಗಳಿಗೆ ಪೊಲೀಸ್ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದರು.
ಕಾಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಸರ್ಕಾರಿ ಅಭಿಯೋಜಕಿ ಸವಿತಾ ಶಿಗ್ಲಿ,ಮತ್ತಿತರರು ಇದ್ದರು.
ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷೆ ಅನ್ನಪೂರ್ಣ ಗಾಣಿಗೇರ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟಪ್ಪನವರ ಸ್ವಾಗತಿಸಿದರು.