ಚಿತ್ರದುರ್ಗ: ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ದೃಢ ನಿಲುವು ತಾಳದಿದ್ದರೆ, ರಾಜ್ಯಾದ್ಯಂತ ಮಾದಿಗ ಸಮುದಾಯ ಸಿಡಿದೇಳಲಿದ್ದು, ಸರ್ಕಾರ ಪತನ ಆಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸಮುದಾಯದ ರಾಜ್ಯ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ಎಚ್ಚರಿಸಿದರು.
ಒಳ ಮೀಸಲಾತಿಗಾಗಿ ಕ್ರಾಂತಿಕಾರಿ ಪಾದಯಾತ್ರೆ ಪುನರಾರಂಭದ ಪೋಸ್ಟರ್‌ಗಳನ್ನು ಗುರುವಾರ ನಡೆದ ಸಭೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜ್ಯದ ಹಲವೆಡೆ ಈಗಾಗಲೇ 80 ದಿನ ಪಾದಯಾತ್ರೆ ನಡೆಸಿ ದುರ್ಗದಲ್ಲಿ ಮುಕ್ತಾಯಗೊಳಿಸಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಿಂದ ಮೇ 24ರಂದು ಪುನ ಆರಂಭಗೊಂಡು ಜೂ. 9ರಂದು ಬೆಂಗಳೂರು ತಲುಪಲಿದೆ ಎಂದು ತಿಳಿಸಿದರು.
24ಕ್ಕೆ ಅರೆಬೆತ್ತಲೆ ಮೆರವಣಿಗೆ, 25ರಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಮೈಮೇಲೆ ಮಲ ಸುರಿದು ಪ್ರತಿಭಟನೆ ನಡೆಸಲಿದ್ದೇವೆ. 26ರಂದು ಸಚಿವರಾದ ಡಾ.ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ, ಆರ್.ಬಿ. ತಿಮ್ಮಾಪುರ ಇನ್ನಿತರರ ಮುಖವಾಡ ಧರಿಸಿ, ನಂತರ ಪ್ರತಿಕೃತಿಗಳನ್ನು ಕತ್ತೆಗಳ ಮೇಲಿಟ್ಟು ಮೆರವಣಿಗೆ ಮಾಡಲಿದ್ದೇವೆ ಎಂದರು.
ನಮ್ಮ ಸಮುದಾಯದ ಸಚಿವರು ಅಸಹಾಯಕರಾಗಿ ಗೇಟ್ ಕೀಪರ್‌ಗಳಂತೆ ವರ್ತಿಸುತ್ತಿದ್ದಾರೆ. ಸಮಾಜಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಆದ್ದರಿಂದ ಪಾದಯಾತ್ರೆಯಲ್ಲಿ ಮತ ನೀಡಿ ಗೆಲ್ಲಿಸಿದ್ದಕ್ಕಾಗಿ ನಮ್ಮನ್ನು ನಾವೇ ಚಾಟಿಯಿಂದ ದಂಡಿಸಿಕೊಂಡು ಕ್ಷಮೆ ಕೇಳಲಿದ್ದೇವೆ. ಈ ಮೂಲಕ ಸಮಾಜವನ್ನು ಎಚ್ಚರಿಸಲಿದ್ದೇವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುವವರಾದರೆ, ಕೂಡಲೇ ಒಳಮೀಸಲಾತಿ ಜಾರಿಗೊಳಿಸಲಿ. ರಾಹುಲ್ ಗಾಂಧಿ ಸೇರಿ ಇನ್ನಿತರೆ ಕಾಂಗ್ರೆಸ್ ನಾಯಕರಿಗೂ ದಲಿತ ಸಮುದಾಯದವರ ಮೇಲೆ ಪ್ರೀತಿ ಬದಲು ದ್ವೇಷವಿದ್ದಂತೆ ಕಾಣುತ್ತಿದೆ. ಇಲ್ಲದಿದ್ದರೆ, ಒಳ ಮೀಸಲಾತಿಗಾಗಿ ಈಗಲೂ ಹೋರಾಡುವ ಅಗತ್ಯವಿರಲಿಲ್ಲ ಎಂದರು.
ಮೀಸಲಾತಿ ಜಾರಿ ತನಕ ಹೊಸ ನೇಮಕಾತಿ, ಬ್ಯಾಕ್‌ಲಾಗ್ ಹುದ್ದೆ, ಬಡ್ತಿ ನಿಲ್ಲಿಸುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೆವು. ಆದರೆ, ಸಮಾಜ ಕಲ್ಯಾಣ ಸಚಿವರು ಕ್ಯಾಬಿನೆಟ್ ತೀರ್ಮಾನ, ಸಿಎಂ ಆದೇಶ ಮೀರಿ ಹೊಸ ನೇಮಕಾತಿ, ಬಡ್ತಿ ಪ್ರಕ್ರಿಯೆ ಮುಂದುವರಿಸಿದ್ದನ್ನು ಗಮನಸಿದರೆ, ಅವ್ಯವಹಾರದ ಶಂಕೆ ವ್ಯಕ್ತವಾಗುತ್ತಿದೆ. ಸಮುದಾಯಕ್ಕೆ ಅನ್ಯಾಯ ಮಾಡಬೇಡಿ ಎಂದು ಒತ್ತಾಯಿಸಿದರು.
ಮುಖಂಡರಾದ ರಾಯಚೂರು ಸುರೇಶ್, ಮಲ್ಲಿಯಪ್ಪ ಸೊಂಡೂರು, ಪ್ರಭುರಾಜ್ ಕೊಡ್ಲಿ, ಬಾಳೆಕಾಯಿ ಶ್ರೀನಿವಾಸ್, ಹನುಮಂತಪ್ಪ ದುರ್ಗ, ಕೆ.ರಾಜಣ್ಣ, ಕೆ.ಮಹಲಿಂಗಪ್ಪ, ರುದ್ರಮುನಿ, ಅವಿನಾಶ್, ಕಾಂತರಾಜ್ ಇತರರಿದ್ದರು.