ಹನೂರು: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಬುಧವಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಭಕ್ತರ ದಂಡೇ ಹರಿದು ಬಂತು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುವುದರ ಮೂಲಕ ಹೊಸ ವರ್ಷವನ್ನು ಆಚರಿಸಿದರು.
ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಹೊಸ ವರ್ಷವನ್ನು ಆಚರಿಸಿದರೆ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಮಾದಪ್ಪನ ಕೃಪೆ ನಮ್ಮ ಮೇಲಿರುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹಾಗಾಗಿ, ಪ್ರತಿ ವರ್ಷ ಹೊಸ ವರ್ಷದಂದು ಸಾವಿರಾರು ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಇದರಲ್ಲಿ ಕಾಲ್ನಡಿಗೆಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಂತೆಯೇ ಕಳೆದ 2ದಿನದ ಹಿಂದೆ ಚಾ.ನಗರ ಸೇರಿದಂತೆ ಮಂಡ್ಯ, ಮಳವಳ್ಳಿ, ಮದ್ದೂರು, ನರಸೀಪುರ ಇನ್ನಿತರ ಕಡೆಗಳಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಹಾಗೂ ಬುಧವಾರ ಹೆಚ್ಚಿನ ಭಕ್ತರು ಆಗಮಿಸಿದ್ದರು. ಕೆಲ ಭಕ್ತರು ರಾತ್ರಿ 12ರ ವೇಳೆಯಲ್ಲಿ ದೇಗುಲದ ಗೋಪುರದ ಮುಂಭಾಗದಲ್ಲಿ ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಘೋಷಣೆಯನ್ನು ಕೂಗುತ್ತಾ ಕೇಕ್ ಕತ್ತರಿಸುವುದರ ಮೂಲಕ ಹೊಸ ವರ್ಷವನ್ನು ಆಚರಿಸಿ ಸಂಭ್ರಮಿಸಿದರೆ, ಇನ್ನುಳಿದ ಭಕ್ತರು ದೇವರ ದರ್ಶನ ಪಡೆದು ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾಗಿ ಮಾದಪ್ಪನ ನೆನೆಯುತ್ತಾ ದೇಗುಲದ ಆವರಣದಲ್ಲಿ ರಾತ್ರಿ ಕಳೆದರು. ಈ ಮೂಲಕ ಭಕ್ತರು ಮ.ಬೆಟ್ಟದಲ್ಲಿ ಹೊಸ ವರ್ಷವನ್ನು ಆಚರಿಸಿದರು.
ಮಾದಪ್ಪನಿಗೆ ವಿಶೇಷ ಪೂಜೆ: ದೇಗುಲವನ್ನು ವಿವಿಧ ಪುಷ್ಪ, ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಹೂವಿನ ಅಲಂಕಾರದಿಂದ ಹೊಸ ವರ್ಷದ ಶುಭಾಶಯವನ್ನು ಕೋರಲಾಯಿತು. ರಾಜಗೋಪುರದ ಮುಂಭಾಗದಲ್ಲಿ ಶಿವನ ಲಿಂಗದ ಮಾದರಿಯನ್ನು ಹೂವಿನಿಂದ ವಿಶೇಷವಾಗಿ ತಯಾರಿಸಲಾಗಿತ್ತು. ಬೆಳಗ್ಗೆ 3.30ರಿಂದ 6 ಗಂಟೆಯವರೆಗೆ ಬೇಡಗಂಪಣ ಸರದಿ ಅರ್ಚಕರು ಸ್ವಾಮಿಗೆ ವಿವಿಧ ಅಭಿಷೇಕ, ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕೀರಿಟಧಾರಣೆಯೊಂದಿಗೆ ಧೂಪ, ದೀಪಧಾರತಿ ಸೇರಿದಂತೆ ಇನ್ನಿತರೆ ಪೂಜಾ ಸೇವಾ ಕಾರ್ಯಗಳನ್ನು ನೆರವೇರಿಸಿದರು. ಬಳಿಕ ಮಹಾ ಮಂಗಳಾರತಿ ಬೆಳಗಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಉತ್ಸವದಲ್ಲಿ ಭಾಗಿಯಾದ ಭಕ್ತರು: ಭಕ್ತರು ಬೆಳಗ್ಗೆ ಜರುಗಿದ ಬೆಳ್ಳಿ ತೇರಿನ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರಲ್ಲದೇ ಬೆಳಗ್ಗೆ 10 ಗಂಟೆಯವರೆಗೂ ದೇಗುಲದ ಆವರಣದಲ್ಲಿ ಭಕ್ತಗಣ ತುಂಬಿ ತುಳುಕುತ್ತಿತ್ತು. ಭಕ್ತರು ಹುಲಿ ರುದ್ರಾಕ್ಷಿ, ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವಗಳು ಬೆಳಗ್ಗೆಯಿಂದ ಸಂಜೆಯವರೆಗೆ ಜರುಗಿತು. ಈ ವೇಳೆ ಭಕ್ತರು ಧನ, ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆದರಲ್ಲದೇ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ದೇವರ ಕೃಪೆಗೆ ಪಾತ್ರರಾದರು. ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ಕೈಗೊಳ್ಳುವುದರ ಮೂಲಕ ತಮ್ಮ ಹರಕೆ ತೀರಿಸಿದರು.
ದೇವರ ದರ್ಶನ ಪಡೆದ ಭಕ್ತರು: ಮ.ಬೆಟ್ಟಕ್ಕೆ ಸಾವಿರಾರು ಭಕ್ತರು ಅದರಲ್ಲೂ ಶಕ್ತಿ ಯೋಜನೆಯ ಪರಿಣಾಮ ಹೆಚ್ಚು ಮಹಿಳೆಯರು ಆಗಮಿಸಿದ್ದರು. ಹಾಗಾಗಿ, ಬಹುತೇಕ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರೆ, ಕೆಲ ಭಕ್ತರು 500 ರೂ. ಟಿಕೆಟ್ ಪಡೆದು ರಾಜಗೋಪುರದ ವಿಶೇಷ ಕೌಂಟರ್ ಮೂಲಕ ತೆರಳಿ ಮಾದಪ್ಪನಿಗೆ ಪೂಜೆ ಸಲ್ಲಿಸಿದರು. ವಿಲಕಚೇತನರಿಗೆ ಹಾಗೂ ವಯೋವೃದ್ಧರಿಗೆ ವಿಶೇಷ ಕೌಂಟರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲ ಭಕ್ತರು ಆಲಂಬಾಡಿ ಬಸವನಿಗೂ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರ ನೇತೃತ್ವದಲ್ಲಿ ಭಕ್ತರಿಗೆ ನೆರಳು, ಕುಡಿಯುವ ನೀರು, ದಾಸೋಹ ಹಾಗೂ ಇನ್ನಿತರ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗಿತ್ತು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ದೇಗುಲದ ಆವರಣದಲ್ಲಿ ಮೊಕ್ಕಾಂ ಹೂಡಿದ್ದರು.
ಕಾಲ್ನಡಿಗೆ ಭಕ್ತರಿಂದ ಅನ್ನ ಸಂತರ್ಪಣೆ: ಕಳೆದ 2 ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಿವಿಧ ಗ್ರಾಮದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ಆಗಮಿಸಿ ಬೀಡು ಬಿಟ್ಟಿದ್ದರು. ಅವರು ಪರ ಮಾಡುವ ಸ್ಥಳದಲ್ಲಿ ಪಂಕ್ತಿಸೇವೆಯನ್ನು ನೆರವೇರಿಸಿದರು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ವಿಜೃಂಭಣೆಯ ಚಿನ್ನದ ರಥೋತ್ಸವ: ಮಂಗಳವಾರ ಸಂಜೆ ದೇಗುಲದ ಆವರಣದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಹಾಗಾಗಿ ಸಂಜೆ 7ರಲ್ಲಿ ಜರುಗಿದ ಚಿನ್ನದ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಉತ್ಸವದ ಹಿಂದೆ ಮುಂದೆ ಸಾಗಿದರಲ್ಲದೇ ದೇಗುಲದ ಆವರಣದಲ್ಲಿದ್ದ ಸಾವಿರಾರು ಭಕ್ತರು ಸಹ ಜತೆಗೂಡಿದರು. ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಜಯ ಘೋಷಗಳನ್ನು ಮೊಳಗಿಸುವುದರ ಮೂಲಕ ಮಾದಪ್ಪನ ಕೃಪೆಗೆ ಪಾತ್ರರಾದರು.