ನ್ಯೂಸ್

ಮಾಜಿ ಸಚಿವ ಜಾಲಪ್ಪ ಅವರಿಗೆ ಗೌರವಾರ್ಪಣೆಗೆ ನಿರ್ಧಾರ

ಕೋಲಾರ: ಮಾಜಿ ಸಚಿವ, ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಆರ್.ಎಲ್.ಜಾಲಪ್ಪ ಅವರ ಸಾಧನೆ ಕುರಿತ ವಿಶೇಷ ಗ್ರಂಥ ಸಿದ್ಧಪಡಿಸಿ ಸೆಪ್ಟೆಂಬರ್ 2ನೇ ವಾರದಲ್ಲಿ ಕೋಲಾರದಲ್ಲಿ ಅರ್ಥಪೂರ್ಣ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಆರ್.ಎಲ್.ಜಾಲಪ್ಪ ಅಭಿಮಾನಿಗಳು ನಿರ್ಧರಿಸಿದ್ದಾರೆ.

ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆದಿದ್ದ ಅಭಿಮಾನಿಗಳ ಸಭೆಯಲ್ಲಿ ಜಾಲಪ್ಪ ಅವರನ್ನು ಅಭಿನಂದಿಸಲು ಒಮ್ಮತದಿಂದ ತೀರ್ಮಾನಿಸಿ, ಜಾಲಪ್ಪ ಅವರು ನಾಡಿಗೆ ನೀಡಿರುವ ಸೇವೆಯು ಮುಂದಿನ ಪೀಳಿಗೆಗೆ ಆದರ್ಶವಾಗಬೇಕಾದ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ಒಳಗೊಂಡ ಗ್ರಂಥ ಸಿದ್ಧಪಡಿಸಲು ಸಂಪಾದಕೀಯ ಮಂಡಳಿ ರಚಿಸಲಾಯಿತು.

ಜಾಲಪ್ಪ ಸಹಕಾರ, ಕಂದಾಯ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ, ರಾಜ್ಯದ ವಿಧಾನ ಮಂಡಲ ಹಾಗೂ ಸಂಸತ್ತಿನಲ್ಲಿ ಅವರು ಮಾಡಿರುವ ಭಾಷಣ, ಚರ್ಚೆ ದಾಖಲಾಗಿದ್ದು, ಪ್ರಮುಖ ಅಂಶಗಳನ್ನು ಗ್ರಂಥದಲ್ಲಿ ಅಳವಡಿಸಿದಲ್ಲಿ ಇತರರಿಗೆ ಮಾದರಿಯಾಗುತ್ತದೆ ಎಂದು ಸಭೆಯಲ್ಲಿ ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ, ಅವರ ನೆನಪಿನಲ್ಲಿ ಸಹಕಾರ ಭವನ ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಆಸಕ್ತಿ ತೋರಬೇಕು ಎಂದರು.

ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಪಟ್ಟಾಭಿರಾಮನ್, ರಾಚಯ್ಯ, ಟಿ.ಚನ್ನಯ್ಯ, ವೆಂಕಟಗಿರಿಯಪ್ಪ, ಸಿ.ಬೈರೇಗೌಡರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಪ್ರತಿವರ್ಷ ಮಾಡಬೇಕು ಎಂದು ಸಲಹೆ ನೀಡಿದರು.

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಎಂ.ವಿ.ಕೃಷ್ಣಪ್ಪ ಅವರ ಹೆಸರಲ್ಲಿ ಗೋಲ್ಡನ್ ಡೇರಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ ಕನಸು ನನಸಾಗಲಿಲ್ಲ, ವಿಧಾನಸಭೆ ಅಧಿವೇಶನದಲ್ಲಿ ಎರಡೂ ಜಿಲ್ಲೆಯ ಶಾಸಕರು ಈ ವಿಚಾರವಾಗಿ ಧ್ವನಿ ಎತ್ತೋಣ ಎಂದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನಗರದ ಪ್ರಮುಖ ರಸ್ತೆಯೊಂದಕ್ಕೆ ಜಾಲಪ್ಪ ಅವರ ಹೆಸರಿಡುವ ಕುರಿತು ನಗರಸಭೆಯನ್ನು ಒಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಎಂಎಲ್.ಅನಿಲ್‌ಕುಮಾರ್, ನಾಗನಾಳ ಸೋಮಣ್ಣ,

ಹನುಮಂತರೆಡ್ಡಿ, ಮೋಹನ್‌ರೆಡ್ಡಿ, ಶಿವಾರೆಡ್ಡಿ, ವೆಂಕಟರೆಡ್ಡಿ, ಚೆನ್ನರಾಯಪ್ಪ, ಗೋವಿಂದರಾಜ್, ನಾಗಿರೆಡ್ಡಿ, ಸಹಕಾರಿ ಯೂನಿಯನ್ ಉಪಾಧ್ಯಕ್ಷ ಗೋವರ್ಧನರೆಡ್ಡಿ, ನಿರ್ದೇಶಕರಾದ ಚೆಂಜಿಮಲೆ ರಮೇಶ್, ಅಣ್ಣಿಹಳ್ಳಿ ನಾಗರಾಜ್, ಗೋಪಾಲಪ್ಪ, ವೆಂಕಟೇಶ್, ಬೈರೇಗೌಡ, ಶಂಕರನಾರಾಯಣಗೌಡ, ತಾಪಂ ಮಾಜಿ ಅಧ್ಯಕ್ಷ ಯುವರಾಜ್, ಮುಖಂಡ ನೆನುಮನಹಳ್ಳಿ ಚಂದ್ರಶೇಖರ್, ಕನ್ನಡ ಪಂಡಿತ ಕೆ.ಎನ್.ಪರಮೇಶ್ವರನ್, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಎನ್.ಮುರಳಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ಉಪಸ್ಥಿತರಿದ್ದರು.

ಮುಂದಿನ ಸಭೆಯಲ್ಲಿ ಸಮಿತಿ ರಚನೆ : ಸಮಾರಂಭಕ್ಕೆ ಸಂಬಂಧಿಸಿದಂತೆ ಸ್ವಾಗತ ಸಮಿತಿಯನ್ನು ಮುಂದಿನ ಸಭೆಯಲ್ಲಿ ರಚಿಸೋಣ, ಇದಕ್ಕೆ ಮೊದಲು ಅಭಿನಂದನಾ ಗ್ರಂಥ ಸಿದ್ಧವಾಗಬೇಕು ಎಂದ ಬ್ಯಾಲಹಳ್ಳಿ ಗೋವಿಂದಗೌಡ, ಗ್ರಂಥ ಸಿದ್ಧತೆಯ ಜವಾಬ್ದಾರಿಯನ್ನು ಜೆ.ಜಿ.ನಾಗರಾಜ್, ಎಚ್.ಎ.ಪುರುಷೋತ್ತಮರಾವ್, ಪತ್ರಕರ್ತರಾದ ಬಿ.ವಿ.ಗೋಪಿನಾಥ್, ಪಾ.ಶ್ರೀ.ಅನಂತರಾಮ್ ಹಾಗೂ ಲೇಖಕ ರವಿ ಇನ್ನಿತರರಿಗೆ ಒಪ್ಪಿಸಿದರು.