ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ನದಿ ದಾಟಲು ಸಾಧ್ಯವಾಗದೆ ಮರವೇರಿ ಕುಳಿತಿದ್ದ ತಂದೆ-ಮಗನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಬನ್ನೂರು ಹೋಬಳಿ ಮಾಕನಹಳ್ಳಿ ಗ್ರಾಮದ ಕೃಷ್ಣೇಗೌಡ (53) ಮತ್ತು ಪುತ್ರ ಪ್ರವೀಣ್(22) ಅವರನ್ನು ರಕ್ಷಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಇಬ್ಬರೂ ಮಂಗಳವಾರ ಬೆಳಗ್ಗೆ ಎಂದಿನಂತೆ ಜಾನುವಾರು ಮೇಯಿಸಲು ನದಿಯ ಮತ್ತೊಂದು ದಡದಲ್ಲಿರುವ ದೇವಿ ತೋಪಿಗೆ ತೆರಳಿದ್ದರು. ಸಂಜೆ ಹೊತ್ತಿಗೆ ನದಿಯಲ್ಲಿ ನೀರು ಹೆಚ್ಚಾಗಿದ್ದು, ನದಿ ದಾಟಿ ಗ್ರಾಮದ ಕಡೆ ಬರಲು ಯತ್ನಿಸಿದ್ದಾರೆ. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ತೋಪಿನಲ್ಲಿ ಮರವೇರಿ ಕುಳಿತಿದ್ದಾರೆ.
ನದಿ ನೀರಿನಲ್ಲಿ ಇಬ್ಬರು ಸಿಲುಕಿರುವ ಮಾಹಿತಿ ಪಡೆದ ಬನ್ನೂರು ಠಾಣೆ ಇನ್‌ಸ್ಪೆಕ್ಟರ್ ಮನೋಜ್‌ಕುಮಾರ್ ಮತ್ತು ಸಿಬ್ಬಂದಿ, ದೋಣಿ ನಡೆಸುವ ಉಮೇಶ್ ಅವರನ್ನು ಕರೆಯಿಸಿ, ನದಿಯ ಮತ್ತೊಂದು ದಡದಲ್ಲಿದ್ದ ತಂದೆ-ಮಗನನ್ನು ಸುರಕ್ಷಿತವಾಗಿ ಕರೆ ತಂದರು.