ಶೃಂಗೇರಿ: ನಾಲ್ಕು ಗ್ರಾಮಗಳನ್ನು ಒಳಗೊಂಡ ಅಡ್ಡಗದ್ದೆ ಗ್ರಾಪಂ ಮಟ್ಟದ ಪ್ರಥಮ ಕನ್ನಡ ಸಮ್ಮೇಳನ ಮಾ.9ರಂದು ಕಾವಡಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ತಿಳಿಸಿದರು.
ಕನ್ನಡಭವನದಲ್ಲಿ ಬುಧವಾರ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಶ್ರೀನಿವಾಸ್‌ಮೂರ್ತಿ ಕರುವಾನೆ ಆಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಶ್ರೀಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಮೊದಲ ಗೋಷ್ಠಿ ಮಾತು-ಮಂಥನದ ಸಂಪನ್ಮೂಲ ವ್ಯಕ್ತಿಯಾಗಿ ಯಕ್ಷಗಾನ ಅರ್ಥಧಾರಿ ಪವನ್ ಕಿರಣ್ ಕೆರೆ ಭಾಗವಹಿಸಲಿದ್ದು ಸಾರ್ಥಕ ಬದುಕಿಗೆ ಸಾಹಿತ್ಯದ ಹೊಳಹು ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಕೃಷಿ ಮತ್ತು ಜಾನಪದ ಎರಡನೇ ಗೋಷ್ಠಿಯಲ್ಲಿ ಕೃಷಿಗೆ ಆಧುನಿಕ ಸ್ಪರ್ಶ ಕುರಿತು ಕೊಪ್ಪ ಪ್ರಗತಿಪರ ಕೃಷಿಕ ಅರವಿಂದ ಸಿಗದಾಳು ಉಪನ್ಯಾಸ ನೀಡಲಿದ್ದಾರೆ. ಜಾನಪದ ಜೀವನ ದೃಷ್ಟಿ ಕುರಿತು ಹಾಸನ ಕಸಾಪ ಜಿಲ್ಲಾಧ್ಯಕ್ಷ ಎಚ್.ಎಂ.ಮಲ್ಲೇಶ್ ಗೌಡ ಮಾತನಾಡಲಿದ್ದಾರೆ. ಪ್ರಾಚಾರ್ಯ, ಸಾಹಿತಿ ಎಚ್.ಎಂ.ನಾಗರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾದ ಮಕ್ಕಳ ತಜ್ಞ ಡಾ. ಎಚ್.ಜಿ.ಲಕ್ಷ್ಮೀನಾರಾಯಣ್, ಸಾಹಿತಿ ಗಣಿತವನ ಶಿವಶಂಕರ್, ನಿವೃತ್ತ ಯೋಧ ಅಶೋಕ್, ಪತ್ರಕರ್ತ ಕೆ.ವಿ.ರಮೇಶ್ ಕರುವಾನೆ, ನಾಟಿ ವೈದ್ಯ ಚಗತೆ ಗಣಪತಿ, ಕ್ರೀಡಾಪಟು ಮಾನ್ವಿತಾ ಅವರನ್ನು ಹಿರಿಯ ಕಸಾಪ ಸದಸ್ಯರಾದ ಧರ್ಮಪ್ಪ ಬೇಗಾನೆ ಗೌರವಿಸಲಿದ್ದಾರೆ. ವಿವಿಧ ಸಮಿತಿಗಳನ್ನು ರಚಿಸಿದ್ದು, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಗ್ರಾಪಂ ಅಧ್ಯಕ್ಷ ಎಚ್.ಕೆ.ಸುಂದರೇಶ್ ಆಯ್ಕಗೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ಮುತ್ತು ಖ್ಯಾತಿಯ ಸತೀಶ್ ಪೈ ಮತ್ತು ಸಂಗಡಿಗರಿಂದ ಹಾಸ್ಯ ನಗೆ ನಾಟಕ ಪ್ರದರ್ಶನ ಇರುತ್ತದೆ ಎಂದರು.
ಕಸಾಪ ಹೋಬಳಿ ಘಟಕ ಅಧ್ಯಕ್ಷ ದಿನೇಶ್ ಅಂಗುರ್ಡಿ, ಅಡ್ಡಗದ್ದೆ ಗ್ರಾಪಂ ಘಟಕದ ಅಧ್ಯಕ್ಷ ಅಣ್ಣುಕುಡಿಗೆ ಶ್ರೀಧರ್‌ರಾವ್, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ, ಸಂಘಟನಾ ಕಾರ್ಯದರ್ಶಿ ಆನಂದಸ್ವಾಮಿ, ಗೌರವ ಸಲಹೆಗಾರ ಬಾ.ರಾ.ಶ್ರೀಕಂಠಯ್ಯ ಇದ್ದರು.