ಬೆಂಗಳೂರು: ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರ ಜತೆಗೆ ಪಾನಮತ್ತ ವೈದ್ಯ ಹಾಗೂ ನರ್ಸ್ ಅಸಭ್ಯವಾಗಿ ಮಾತನಾಡಿದ ಆರೋಪದಡಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಸಂತಪುರದ ಮಾರುತಿ ಲೇಔಟ್ ನಿವಾಸಿ ಸ್ನೇಹಾ ಭಟ್ ಎಂಬುವವರು ನೀಡಿದ ದೂರಿನ ಮೇರೆಗೆ ಪಗ್ರತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಪ್ರದೀಪ್ ಮತ್ತು ನರ್ಸ್ ಮಹೇಂದ್ರ ಎಂಬುವವರ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಸಂತಪುರ ಮುಖ್ಯರಸ್ತೆಯ ಪ್ರಗತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ.೩ರಂದು ಈ ಘಟನೆ ನಡೆದಿತ್ತು. ಸ್ನೇಹಾ ಭಟ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ತಮ್ಮ ಕರ್ತವ್ಯ ಮುಗಿದಿದ್ದರೂ ವೈದ್ಯ ಪ್ರದೀಪ್ ಮತ್ತು ನರ್ಸ್ ಮಹೇಂದ್ರ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಈ ಇಬ್ಬರು ಸ್ನೇಹಾ ಭಟ್ ಅವರ ಕೈಗೆ ಇಂಜೆಕ್ಷನ್ ನೀಡುವಾಗ ನಾಲ್ಕೈದು ಕಡೆಗೆ ಚುಚ್ಚಿದ್ದಾರೆ. ಅಷ್ಟೇ ಅಲ್ಲದೆ ಸ್ನೇಹಾ ಭಟ್ ಅವರೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಇಬ್ಬರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಒಳಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.