ನ್ಯೂಸ್

ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಒತ್ತಾಯ

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ಹಲವು ವರದಿಗಳನ್ವಯ ಮಹಿಳೆಯರ ಆರೋಗ್ಯದ ಸ್ಥಿತಿ ಶೋಚನೀಯವಾಗಿದೆ. ಅಪೌಷ್ಟಿಕತೆ ಒಂದೆಡೆಯಾದರೆ ಅತಿ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಜತೆಗೆ ಇತೀಚೆಗೆ ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಬಾಣಂತಿ ಮತ್ತು ನವಜಾತ ಶಿಶು ಮರಣದ ಸಂಖ್ಯೆ ಹೆಚ್ಚಾಗುತ್ತಿದೆ. ದಾವಣಗೆರೆಯಲ್ಲಿ 28 ಬಾಣಂತಿಯರು, 125 ನವಜಾತ ಶಿಶುಗಳು, ಬಳ್ಳಾರಿಯಲ್ಲಿ 5, ಬೆಳಗಾವಿಯಲ್ಲಿ 11 ನವಜಾಾತ ಶಿಶುಗಳು ಸಾವನ್ನಪ್ಪಿರುವುದು ನೋವಿನ ಸಂಗತಿ. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಈ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಆರ್ಥಿಕ ಬಿಕಟ್ಟಿನಿಂದಾಗಿ ಹಸಿವಿನಿಂದ ಸಂಭವಿಸುತ್ತಿರುವ ಸಾವುಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ ಎಂದು ಕಿಡಿಕಾರಿದರು.

ಎಲ್ಲ ಮಹಿಳೆಯರಿಗೆ ಶಿಕ್ಷಣ ಮತ್ತು ಆರೋಗ್ಯ ಖಾತ್ರಿಪಡಿಸಬೇಕು. ಎಲ್ಲ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜುಗಳನ್ನು ತೆರೆಯಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿ ಮತ್ತು ನವಜಾತ ಶಿಶುವಿನ ಸಾವಿನ ಸಂಖ್ಯೆಯನ್ನು ತಡೆಗಟ್ಟಬೇಕು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಬೇಕು. ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕು. ಶುಚಿ ಯೋಜನೆ ಜಾರಿಗೊಳಿಸಬೇಕು. ಮಹಿಳೆಯರ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಯರಲ್ಲಿನ ಅಪೌಷ್ಟಿಕತೆ ತಡೆಗಟ್ಟಲು ಕಾಲೇಜು ಹಂತದವರೆಗೂ ಬಿಸಿಯೂಟ ವಿಸ್ತರಿಸಬೇಕು. ಯುವತಿಯರಿಗಾಗಿ ಜೂಡೋ-ಕರಾಟೆಯಂತಹ ಆತ್ಮರಕ್ಷಣ ಕೋರ್ಸ್‌ಗಳನ್ನು ಕಡ್ಡಾಯಗೊಳಿಸಬೇಕು. ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಪ್ರಾಥಮಿಕ ಆರೋಗ್ಯ ಘಟಕ ಸ್ಥಾಪಿಸಬೇಕು. ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಿ, ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸಬೇಕು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ, ಮೂಲಸೌಕರ್ಯ ಮತ್ತು ಬಸ್ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾರ್ವಜನಿಕ ಶೌಚಾಗೃಹ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು. ಬಳ್ಳಾರಿ ಭಾಗದಲ್ಲಿ ಹೆಚ್ಚಾಗುತ್ತಿರುವ ಬಾಲ್ಯ ವಿವಾಹ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಮತ್ತು ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾರ್ಯದರ್ಶಿ ಸೀಮಾ.ಜಿ.ಎಸ್ ಸೇರಿದಂತೆ ಹಲವರು ಇದ್ದರು.