ಗೊಣಗಿಲಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಚ್.ಶ್ರೀನಿವಾಸ್, ಭಾರತಿ ಸಿ.ರಾಜಪ್ಪ, ಸುಜಿತಾ, ಬಿ.ಮಂಜು, ಬಿ.ಆರ್.ರವಿ, ಸಿಡಿಪಿಒ ಚರಣ್ ಕುಮಾರ್ ಇತರರಿದ್ದರು 
ನ್ಯೂಸ್

ಮಹಿಳೆಯರ ಪ್ರಗತಿಗೆ ಹಲವು ಯೋಜನೆ

ಲಿಂಗದಹಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗರ್ಭಿಣಿ ಹಾಗೂ ಬಾಣಂತಿಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮೀ, ಭಾಗ್ಯಲಕ್ಷ್ಮೀ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಲಿಂಗದಹಳ್ಳಿ ಹೋಬಳಿಯ ಗೊಣಗಿಲಕಟ್ಟೆ ಗ್ರಾಮದಲ್ಲಿ ನರೇಗಾ ಯೋಜನೆಯಿಂದ 13 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ಹಾಲು, ಮೊಟ್ಟೆ, ಪೌಷ್ಟಿಕಾಂಶಗಳ ದ್ವಿದಳ ಧಾನ್ಯಗಳನ್ನು ನೀಡುತ್ತಿದ್ದು ಮಹಿಳೆಯರು ಇವುಗಳ ಸದುಪಯೋಗ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸಬೇಕು ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ, ಲಿಂಗದಹಳ್ಳಿ ಹೋಬಳಿಯಲ್ಲಿನ ಪ್ರತಿ ಗ್ರಾಮಗಳಲ್ಲಿಯೂ ಅಂಗನಾಡಿ ಕೇಂದ್ರ ಮತ್ತು ಅದಕ್ಕೆ ಪೂರಕ ಸಾಮಗ್ರಿ ಹಾಗೂ ಕಾರ್ಯಕರ್ತೆಯರನ್ನು ನೇಮಕ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಶಾಸಕರ ಕಾರ್ಯ ಮಾದರಿ. ಇತ್ತೀಚೆಗೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸುತ್ತಿರುವುದರಿಂದ ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ದಾಖಲಾಗುವುದನ್ನು ತಡೆಗಟ್ಟಿದಂತಾಗಿದೆ ಎಂದು ಹೇಳಿದರು.

ಸಿಡಿಪಿಒ ಚೇತನ್ ಕುಮಾರ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಪಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಉಡೇವಾ ಗ್ರಾಪಂ ಅಧ್ಯಕ್ಷೆ ಭಾರತಿ ಸಿ.ರಾಜಪ್ಪ, ಪಿಡಿಒ ಬಿ.ಮಂಜು, ಉಪಾಧ್ಯಕ್ಷೆ ಸುಜಿತಾ, ಸದಸ್ಯರಾದ ಲಕ್ಷ್ಮೀಬಾಯಿ, ಆಂಡಿಗೌಡ, ಉಮೇಶ್, ಶ್ರೀನಿವಾಸ್, ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹಂತೇಶ ಬಜಂತ್ರಿ , ಗ್ರಾಪಂ ಮಾಜಿ ಅಧ್ಯಕ್ಷ ಎಲ್.ಎನ್. ಲಿಂಗರಾಜು, ಗ್ರಾಮಸ್ಥರಾದ ರಾಜಪ್ಪ, ತಮ್ಮಯ್ಯ, ಯಲ್ಲಪ್ಪ ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.