ನ್ಯೂಸ್

ಮಹಿಳಾ ವಿದೇಶಿ ಡ್ರಗ್ ಪೆಡ್ಲರ್ ಬಂಧನ: ೨೪ ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ

ಬೆಂಗಳೂರು: ಮಾದಕವಸ್ತುವಾದ ಎಂಡಿಎಂಎ ಕ್ರಿಸ್ಟಲ್ ಅನ್ನು ದಿನಸಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ದೃವ್ಯ ನಿಗ್ರಹ ದಳದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನೈಜಿರಿಯಾದ ರೋಸೆಲೈಮಾ(೪೦) ಬಂಧಿತ ಮಹಿಳೆ.

ಆರೋಪಿತೆಯಿಂದ ೧೨ ಕೆ.ಜಿ ತೂಕದ ಬಿಳಿ ಹಾಗೂ ಹಳದಿ ಬಣ್ಣದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್, ಒಂದು ಮೊಬೈಲ್ ಫೋನ್, ೭೦ ಸಿಮ್ ಕಾರ್ಡ್ ಜಪ್ತಿ ಮಾಡಿಕೊಳ್ಳಲಾಗಿದೆ. ಇವುಗಳ ಮೌಲ್ಯ ೨೪ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಾದಕ ವಸ್ತುಗಳ ಮಾರಾಟದಲ್ಲಿ ಇದುವರೆಗೂ ನಡೆದ ಕಾರ್ಯಾಚರಣೆಯಲ್ಲಿ ಇದು ಅತ್ಯಂತ ದೊಡ್ಡ ಕಾರ್ಯಾಚರಣೆಯಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಆರೋಪಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಮತ್ತೊಬ್ಬ ವಿದೇಶಿ ಮಹಿಳೆ ತಲೆಮರೆಸಿಕೊಂಡಿದ್ದು ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆಕೆ ಮುಂಬೈನಲ್ಲಿ ನೆಲಸಿದ್ದು, ರೋಸೆಲೈಮಾಗೆ ಎಂಡಿಎಂಎ ಕ್ರಿಸ್ಟಲ್ ಪೂರೈಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು.