ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಹಳ ದಿನಗಳಿಂದ ಹಂಚಿಕೆ ಆಗದೇ ಬಾಕಿ ಉಳಿದಿದ್ದ ಮಹಿಳಾ ಕೈಗಾರಿಕಾ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಮಹಿಳಾ ಉದ್ದಿಮೆದಾರರ ದಿನಾಚರಣೆ ಅಂಗವಾಗಿ ಬುಧವಾರ ಎಫ್‌ಕೆಸಿಸಿಐ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿ ಪಾರ್ಕ್‌ಗಳನ್ನು ಘೋಷಿಸಿ ಹಲವಾರು ವರ್ಷಗಳೇ ಸಂದಿವೆ. ಆದರೆ ಇದುವರೆಗೂ ಅವುಗಳಲ್ಲಿನ ಕೈಗಾರಿಕಾ ನಿವೇಶನಗಳ ಹಂಚಿಕೆ ಕಾರ್ಯ ಪ್ರಾರಂಭಿಸಿರಲಿಲ್ಲ. ಈಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯದ ಎಲ್ಲಾ ಭಾಗಗಳಲ್ಲೂ ಇರುವ ಮಹಿಳಾ ಕೈಗಾರಿಕಾ ಪಾರ್ಕಿನ ನಿವೇಶನಗಳನ್ನು ಹಂಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮಹಿಳೆಯರು ಉದ್ಯಮ ಸ್ಥಾಪಿಸಲು ಅಗತ್ಯ ಪ್ರೋತ್ಸಾಹ ನೀಡಲು ರಾಜ್ಯ ಸರಕಾರ ಬದ್ಧ್ದವಾಗಿದೆ. ಅಲ್ಲದೆ, ಮಹಿಳೆಯರು ಯಾವುದೇ ಸಹಾಯವಿಲ್ಲದೆ ವಿಶೇಷ ಸವಲತ್ತುಗಳು ಹಾಗೂ ಮೀಸಲಾತಿ ಇಲ್ಲದೆ ಸ್ವಂತ ಬಲದಿಂದಲೇ ಉದ್ಯಮ ಸ್ಥಾಪಿಸುವ ಹಾಗೂ ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.