ನ್ಯೂಸ್

ಮಹಿಳಾ ಕಾಲೇಜು ಬಿಬಿಎ ವಿದ್ಯಾರ್ಥಿನಿಯರಿಗೆ ಉಚಿತ ಪುಸ್ತಕ ವಿತರಣೆ / ಸುಶೀಕ್ಷಿತರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ / ಡಾ.ಡಿ.ಇ.ಗಂಗಾಧರರಾವ್

ವಿಜಯವಾಣಿ ಸುದ್ದಿಜಾಲ ಕೋಲಾರ
ಸಮಾಜದಲ್ಲಿನ ಸವಾಲುಗಳನ್ನು ಮೆಟ್ಟಿನಿಂತು ಉತ್ತಮ ಜೀವನ ಕಂಡುಕೊಳ್ಳಲು ಹೆಣ್ಣುಮಕ್ಕಳು ಮೊದಲು ಸುಶೀಕ್ಷಿತರಾಗಿ ಶೈಕ್ಷಣಿಕ ಸಾಧನೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಇ.ಗಂಗಾಧರರಾವ್ ತಿಳಿಸಿದರು.

ಕಾಲೇಜಿನ ನಿರ್ವಹಣಾ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಬಿಬಿಎ ಪದವಿ ವಿದ್ಯಾರ್ಥಿನಿಯರಿಗೆ ರಾಜ್ಯಶಿಕ್ಷಣ ಕ್ರಮದ ಪಠ್ಯಪುಸ್ತಕಗಳನ್ನು ದಾನಿಗಳಾದ ನಗರದ ನೂತನ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕವಿತಾ ಅವರ ನೆರವಿನಿಂದ ಉಚಿತವಾಗಿ ವಿತರಿಸಿ ಮಾತನಾಡಿದರು.

ಹೆಣ್ಣು ಮಕ್ಕಳು ಇಂದು ಸಮಾಜದ ಎಲ್ಲಾ ರಂಗಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಯಾವುದೇ ಪರೀಕ್ಷೆ ಫಲಿತಾಂಶ ಬಂದರೂ ಬಾಲಕೀಯರೇ ಮೇಲುಗೈ ಎಂಬುದನ್ನು ಕಾಣುತ್ತಿದ್ದೇವೆ. ಪದವಿ ಮುಗಿಸಿ ಮದುವೆ ಮಾಡಿಕೊಂಡು ಹೊಸ ಜೀವನ ನಡೆಸುವುದು ಒಂದು ಹಾದಿಯಾದರೂ, ಅದರ ಜತೆಗೆ ನೀವು ಓದಿದ ಶಿಕ್ಷಣ ನಿಮ್ಮ ಸ್ವಾವಲಂಬಿ ಬದುಕಿಗೂ ಕಾರಣವಾಗಬೇಕು ಎಂದರು.

ಮಹಿಳಾ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥ ಹಾಗೂ ಬಿಬಿಎ ವಿದ್ಯಾರ್ಥಿಗಳಿಗಾಗಿ `ಸಾಪ್ಟ್ ಸ್ಕಿಲ್ಸ್ ಪಾರ್ ಮ್ಯಾನೇರ‍್ಸ್' ಎಂಬ ಪುಸ್ತಕವನ್ನು ರಚಿಸಿ ವಿತರಿಸಿರುವ ಜಿ.ಎಂ.ಪ್ರಕಾಶ್ ಮಾತನಾಡಿ, ಗ್ರಾಮೀಣ ಹೆಣ್ಣು ಮಕ್ಕಳು ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಬರುವ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಮಹಿಳಾ ಕಾಲೇಜಿನಲ್ಲಿ ಓದುತ್ತಿರುವವರು ಹಳ್ಳಿಗಾಡಿನಿಂದ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುವ ಆಶಯ ಹೊಂದಿದ್ದೀರಿ. ನಿಮ್ಮ ಹಾಗೂ ಪೋಷಕರ ಆಸೆ ಈಡೇರಲು ಶ್ರಮವಹಿಸಿ ಓದಿ, ಸಾಧಕರಾಗಿ ಕಾಲೇಜಿಗೂ ಒಳ್ಳೆಯ ಹೆಸರು ತನ್ನಿ ಎಂದು ಹಾರೈಸಿ ಪುಸ್ತಕದ ಕುರಿತು ವಿವರಿಸಿದರು.

ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಕೆ.ರಾಮಕೃಷ್ಣ ಮಾತನಾಡಿ, ಪುಸ್ತಕಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ರಚಿಸಲಾಗಿದೆ. ಜತೆಗೆ ಉಚಿತವಾಗಿ ಒದಗಿಸಿಕೊಡುವ ಪ್ರಯತ್ನದಲ್ಲೂ ಸಫಲತೆ ಕಾಣಲಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಪುಸ್ತಕಗಳ ದಾನಿ ಉಪನ್ಯಾಸಕಿ ಕವಿತಾ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ನೆರವಾಗುವ ಇಚ್ಚೆಯಿಂದ ಈ ನೆರವು ನೀಡಿದ್ದೇನೆ. ನಾನೂ ಒಂದು ಹೆಣ್ಣಾಗಿ, ಮತ್ತಷ್ಟು ಹೆಣ್ಣು ಮಕ್ಕಳ ಶೈಕ್ಷಣಿಕ ಬದುಕಿಗೆ ನೆರವಾಗುವ ಪ್ರಯತ್ನ ಮಾಡಿದ್ದೇನೆ. ಈ ಪುಸ್ತಕಗಳು ನಿಮ್ಮ ಸಾಧನೆಗೆ ನೆರವಾದರೆ ಸಾರ್ಥಕ ಎಂದು ತಿಳಿಸಿದರು.

ಕೆ.ಆರ್.ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಕೆ.ಆರ್.ಮಂಜುಳಾ, ಮಹಿಳಾ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ.ಸೌಮ್ಯ, ಡಾ.ಸುಮಂಗಳ, ಡಾ.ಮುನಿರಾಜು, ವೇಣು, ರಜನಿ, ಮಂಜುಳಾ, ಡಾ.ವಿ.ರಮೇಶ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

ಚಿತ್ರ ೧೫ ಕೆ.ಎಲ್.ಆರ್. ೦೪ : ನಗರದ ಸರ್ಕಾರಿ ಮಹಿಳಾ ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಉಚಿತವಾಗಿ ಪಠ್ಯಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಇ.ಗಂಗಾಧರರಾವ್ ವಿತರಿಸಿದರು.