ನ್ಯೂಸ್

ಮಹಾವೀರ ಹನುಮ: ಭಜರಂಗಿ ಭಕ್ತರಿಂದ ಭಕ್ತಿಗೀತೆ ಬಿಡುಗಡೆ

ಬೆಂಗಳೂರು: ರಾಮ ಭಂಟ ಹನುಮಂತನಿಗೆ ಪ್ರತಿ ಶನಿವಾರ ವಿಶೇಷ ಪೂಜೆ, ವ್ರತ ಕೈಗೊಳ್ಳುವ ಮೂಲಕ ಭಕ್ತರು ಭಕ್ತಿ ಮೆರೆಯುತ್ತಾರೆ. ಇಲ್ಲೊಂದು ಭಕ್ತರ ತಂಡ ಆಂಜನೇಯನಿಗೆ ವಿಡಿಯೋ ಹಾಡಿನ ಮೂಲಕ ವಿಶೇಷವಾಗಿ ಭಕ್ತಿ ಸಮರ್ಪಿಸಿದೆ. ಇತ್ತೀಚೆಗಷ್ಟೆ ನಿರ್ಮಾಪಕ ಸೂರಪ್ಪ ಬಾಬು ‘ಮಹಾವೀರ ಹನುಮ’ ವಿಡಿಯೋ ಸಾಂಗ್ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದರು. ‘ಹನುಮ ಹನುಮ ನೀನೆ ನನ್ನ ಪ್ರಾಣ ಹನುಮ, ರಘುರಾಮನಾಣೆ’ ಎಂದು ಸಾಗುವ ವಿಡಿಯೋ ಸಾಂಗ್‌ನಲ್ಲಿ ಬಾಲನಟಿ ಋತುಸ್ಪರ್ಶ ಹೆಜ್ಜೆ ಹಾಕಿದ್ದಾರೆ.

ರಾಘವ ಸೂರ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾಯಿ ಸರ್ವೇಶ್ ಸಾಹಿತ್ಯ ರಚಿಸಿ, ಸಂಗೀತ ನೀಡುವ ಜತೆಗೆ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ರೋಹಿತ್ ರೆಡ್ಡಿ ರಾಮನಾಗಿ, ರಾಜ್ ಲಕ್ಷ್ಮಣನಾಗಿ, ಅಂಗಧನಾಗಿ ಜೀವನ್, ಸೀತೆಯಾಗಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಘವ ಸೂರ್ಯ, ‘ಈ ಹಾಡನ್ನು ಅಂಜನಾದ್ರಿ ಬೆಟ್ಟ, ಆನೆಗುಂದಿಯ ಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಚಿಂತಾಮಣಿ ಮಠದಲ್ಲಿ ಚಿತ್ರೀಕರಿಸಿದ್ದೇವೆ. ಹಂಪಿ ಪ್ರಾಧಿಕಾರದ ವಿಶೇಷ ಅನುಮತಿಯೊಂದಿಗೆ, 105 ತಂತ್ರಜ್ಞರ ಜತೆ 575 ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಸುಲಭದ ಮಾತಾಗಿರಲಿಲ್ಲ’ ಎಂದು ಶೂಟಿಂಗ್ ಸಮಯದ ಅನುಭವ ಹಂಚಿಕೊಂಡರು. ಹಾಡಿಗೆ ರಂಗಸ್ವಾಮಿ ಛಾಯಾಗ್ರಹಣ, ಕಂಬಿರಾಜು ನೃತ್ಯ ಸಂಯೋಜಿಸಿದ್ದಾರೆ.