ನ್ಯೂಸ್

ಮಹಾವೀರ ಸಹಕಾರಿಗೆ ೩.೫೫ ಕೋಟಿ ರೂ. ಲಾಭ

ಹುಕ್ಕೇರಿ: ಮಹಾವೀರ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿ ಸಂಘ ೩.೫೫ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಜತೆಗೆ ಜಿಲ್ಲೆ ವಿವಿಧೆಡೆ ಇರುವ ಬಡ, ಮಧ್ಯಮ ವರ್ಗದ ಜನರು, ಕೂಲಿಕಾರರು, ಬೀದಿ ವ್ಯಾಪಾರಸ್ಥರು, ಸಣ್ಣ ಉದ್ಯಮಿದಾರರ ಆರ್ಥಿಕ ಮಟ್ಟ ಸುಧಾರಣೆ ಸದುದ್ದೇಶದಿಂದ ಎರಡು ದಶಕಗಳ ಹಿಂದೆ ಸಂಸ್ಥೆ ಆರಂಭಿಸಲಾಗಿತ್ತು. ಇಂದು ಹೆಮ್ಮರವಾಗಿ ಬೆಳೆದಿದೆ. ೧೫೧೫೧ ಸದಸ್ಯರನ್ನು ಹೊಂದಿ ಪ್ರಸಕ್ತ ವರ್ಷಾಂತ್ಯಕ್ಕೆ ೧೧೮೩ ಕೋಟಿ ರೂ. ವಹಿವಾಟು ನಡೆಸಿದೆ. ೪೨ ಲಕ್ಷ ರೂ. ಷೇರು ಬಂಡವಾಳ, ೧೦ ಕೋಟಿ ರೂ. ಕಾಯ್ದಿಟ್ಟ ಹಾಗೂ ಇತರ ನಿಧಿಗಳಿವೆ. ೩೧೫ ಕೋಟಿ ರೂ. ದುಡಿಯುವ ಬಂಡವಾಳವಿದ್ದು, ೨೫೦ ಕೋಟಿ ರೂ. ಸಾಲ ವಿತರಿಸಲಾಗಿದೆ. ೨೮೦ ಕೋಟಿ ರೂ. ಠೇವು ಸಂಗ್ರಹಿಸಿ ೩೮ ಕೋಟಿ ರೂ. ಹೂಡಿಕೆಗಳೊಂದಿಗೆ ೩.೫೫ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವಿವರಿಸಿದರು. ಸದ್ಯ ನಾಲ್ಕು ಜಿಲ್ಲೆಗಳಲ್ಲಿ ಸಂಸ್ಥೆ ಕಾರ್ಯಕ್ಷೇತ್ರ ಹೊಂದಿದೆ. ೧೭ ಶಾಖೆಗಳಿದ್ದು, ಹಾವೇರಿ, ಗದಗ, ಕಾರವಾರ, ಶಿವಮೊಗ್ಗ ಜಿಲ್ಲೆಯಲ್ಲಿ ನೂತನ ಶಾಖೆ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಿರ್ದೇಶಕರಾದ ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಅಶೋಕ ಪಾಟೀಲ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ವ್ಯವಸ್ಥಾಪಕ ಸಂತೋಷಸಿAಗ ರಜಪೂತ, ಪ್ರವೀಣ ಪಾಟೀಲ ಇತರರಿದ್ದರು.