ನ್ಯೂಸ್

ಮಹಾಲಿಂಗೇಶ್ವರ ಜಾತ್ರೋತ್ಸವ ನಾಳೆಯಿಂದ

ನಾಪೋಕ್ಲು: ಸಮೀಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವ ಏ.13ರಿಂದ 19ರವರೆಗೆ ಜರುಗಲಿದೆ.


ಏ.13ರಂದು ಗುರುವಾರ ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಗುವುದು. ಏ.14ರಂದು ಗಣ ಹೋಮ ಮತ್ತು ಕೊಡಿಮರ ಏರಿಸಲಾಗುವುದು. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಉತ್ಸವಬಲಿ ನಡೆಯಲಿದೆ. ಏ. 16 ರಂದು ಭಾನುವಾರ ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ ಜರುಗಲಿದೆ.


ಏ.17ರಂದು ಸೋಮವಾರ ಹಗಲು ನೃತ್ಯಬಲಿ ನಡೆದು ಸಂಜೆ ದೀಪಾರಾಧನೆ ನಡೆಯಲಿದೆ. 18 ರಂದು ಪಟ್ಟಣಿಹಬ್ಬ ಜರುಗಲಿದೆ. ಬೆಳಗ್ಗೆ ತುಲಾಭಾರ, ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ ಜೋಡಿ ದೇವರ ನೃತ್ಯೋತ್ಸವ ನಡೆಯಲಿದೆ.
ಪಾಲೂರಪ್ಪ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಳಪಡುವ ಕುಯ್ಯಂಗೇರಿ ನಾಡಿನ ಗ್ರಾಮಗಳಾದ ಪಾಲೂರು, ಹೊದ್ದೂರು, ಹೊದವಾಡ, ಕುಂಬಳದಾಳು, ಅರವತ್ತೋಕ್ಲು, ಬೆಟ್ಟಗೇರಿ, ಹೆರವನಾಡು, ಕಾರುಗುಂದ ಮತ್ತು ಕಡಿಯತ್ತೂರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹಾಲಿಂಗೇಶ್ವರ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಕೋರಿದ್ದಾರೆ.