ಬೆಳಗಾವಿ: ತಾಲೂಕಿನ ಸಿಂದೋಳ್ಳಿ ಗ್ರಾಮದ ಮಹಾಲಕ್ಷ್ಮೀ ಜಾತ್ರೆಯಲ್ಲಿ ಗುರುವಾರ ವಿವಿಧ ಬಡಾವಣೆಯ ಮಹಿಳೆಯರು, ಸುತ್ತಮುತ್ತಲಿನ ಗ್ರಾಮಸ್ಥರು ದೇವಿಗೆ ಉಡಿ ತುಂಬುವ ಶಾಸ್ತ್ರ ನೆರವೇರಿಸಿದರು. ಮತ್ತೊಂದೆಡೆ ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗ್ರಾಮದಲ್ಲಿ ಜಾತ್ರೆಯ ಹೊನ್ನಾಟದ ಬಳಿಕ ಮಂಟಪದಲ್ಲಿ ಮಹಾಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಗ್ರಾಮದಲ್ಲಿ ಜಾತ್ರೆ ಸಡಗರ ಮನೆ ಮಾಡಿದ್ದು, ದೇವಿಗೆ ಉಡಿ ತುಂಬಲು ಅಪಾರ ಸಂಖ್ಯೆಯ ಮಹಿಳೆಯರು ಸೇರಿದರು. ಎಲ್ಲ ಸಮುದಾಯಗಳ ಜನರೂ ಒಂದಾಗಿ ವಿಶೇಷ ಪೂಜೆ ಸಲ್ಲಿಸಿದರು. ಕೆಲ ಭಕ್ತರು ದೇವಿಯ ಹೆಸರಿನಲ್ಲಿ ಸಾರ್ವಜನಿಕರಿಗೆ ಅನ್ನದಾನ ಮಾಡಿದರು.
ಸಿಂದೋಳ್ಳಿ ಗ್ರಾಮದೇವತೆ ಹೆಸರಿನಲ್ಲಿ ಹರಕೆ ಹೊತ್ತು ಮಕ್ಕಳನ್ನು ಹೆತ್ತವರು, ಆರೋಗ್ಯ ಹರಕೆ ಹೊತ್ತವರು, ಮಹಿಳೆಯರು, ಹೊಸದಾಗಿ ವಿವಾಹ ಆದವರು ಹೀಗೆ ಅನೇಕ ಹರಕೆ ಹೊತ್ತವರೆಲ್ಲರೂ ಗುರುವಾರ ಬೆಳಗ್ಗೆಯಿಂದಲೇ ಸಾಲಾಗಿ ನಿಂತು ದೇವಿಗೆ ಉಡಿ ತುಂಬಿ ಭಕ್ತಿ ಮೆರೆದರು. ನೆರೆಯ ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವಿಗೆ ಹಸಿರು ಸೀರೆ, ಬಳೆ ಉಡಿ ತುಂಬಿದರು.