ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಚಿಮ್ಮು ಹಲಗೆಯಾಗಿರುವ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗೆ ಸೋಮವಾರ ಚಾಲನೆ ಸಿಕ್ಕಿತು. ಪ್ರೇಕ್ಷಕರಿಲ್ಲದೆ ಆರಂಭವಾದ ಟೂರ್ನಿಗೆ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಚಾಲನೆ ನೀಡಿದರು.
ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಉಪಾಧ್ಯಕ್ಷ ಶ್ರೀರಾಮ್ ಚಾಲನೆ ನೀಡಿದರು. ಕೆಎಸ್‌ಸಿಎ ಪದಾಧಿಕಾರಿಗಳಾದ ಮಂಜುನಾಥ್, ಸದಾನಂದ್, ಶಶಿಧರ್, ಹರಿಕೃಷ್ಣ, ಟೈಟಲ್ ಪ್ರಾಯೋಜಕ ರೊನಾಲ್ಡ್ ಡಿಸೋಜಾ ಇತರರಿದ್ದರು.
ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮಂಗಳೂರು ಡ್ರಾೃಗನ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಿದರೆ, ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಹಾಗೂ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್ ಮೊದಲ ದಿನದ ಎರಡನೇ ಪಂದ್ಯದಲ್ಲಿ ಮುಖಾಮುಖಿ ಆದವು. ಆ ಮೂಲಕ ಮೂರು ವರ್ಷದ ಬಳಿಕ ಒಡೆಯರ್ ಮೈದಾನ ರಾಜ್ಯದ ಯುವ ಕ್ರಿಕೆಟಿಗರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.
ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ 11 ರಿಂದ 28 ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಕೆಎಸ್‌ಸಿಎ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಫ್ರಾಂಚೈಸಿಗಳು ಕೂಡ ತಂಡಗಳ ಅಭ್ಯಾಸ, ಪ್ರಚಾರ ಇತ್ಯಾದಿ ಚಟುವಟಿಕೆಗಳನ್ನು ಆರಂಭಿಸಿದ್ದವು. ಆದರೆ, ಪೊಲೀಸ್ ಇಲಾಖೆಯಿಂದ ಅನುಮತಿ ಸಿಗದ ಕಾರಣ ಟೂರ್ನಿಯ ಎಲ್ಲ ಪಂದ್ಯಗಳನ್ನು ಮೈಸೂರಿಗೆ ವರ್ಗಾಯಿಸಲಾಗಿತ್ತು.