ನ್ಯೂಸ್

ಮಹದಾಯಿಗೆ ಬೇಕಿದೆ ಹೆಚ್ಚಿನ ಅನುದಾನ

ಗದಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಲಿರುವ 2021-22ನೇ ಸಾಲಿನ ಬಜೆಟ್ ಮೇಲೆ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಹೊಸ ಯೋಜನೆಗಳನ್ನು ಜಿಲ್ಲೆಗೆ ನೀಡಬೇಕೆಂಬ ಆಗ್ರಹ ಮಾರ್ದನಿಸುತ್ತಿದೆ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವೆ ಮಹದಾಯಿ ನೀರು ಹಂಚಿಕೆ ಕುರಿತಂತೆ ಮಹದಾಯಿ ನ್ಯಾಯಾಧಿಕರಣ ರಾಜ್ಯಕ್ಕೆ 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿರುವುದು. ಜತೆಗೆ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ರೈತರಲ್ಲಿ ಸಂತಸವನ್ನುಂಟು ಮಾಡಿದೆ. 2020-21ನೇ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆವರು ಬಜೆಟ್​ನಲ್ಲಿ ಮಹದಾಯಿ ಯೋಜನೆ ಕಾಮಗಾರಿಗೆ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಆದರೆ, ಈ ಅನುದಾನ ಸಾಲದು. ಹೀಗಾಗಿ, ಹೆಚ್ಚುವರಿ ಅನುದಾನ ಘೋಷಣೆ ಮಾಡಬೇಕು ಎಂಬ ಆಗ್ರಹ ಜಿಲ್ಲೆಯಲ್ಲಿದೆ. ಯೋಜನೆಯ ಕೊನೆಯ ಗ್ರಾಮಕ್ಕೆ ಮಲಪ್ರಭೆ ಹರಿಯಬೇಕೆಂದರೆ ಕಾಲುವೆ, ಉಪಕಾಲುವೆ ದುರಸ್ತಿ ಆಗಬೇಕು. ಇದಕ್ಕಾಗಿ ಇನ್ನಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಅಲ್ಲದೆ, ಹಿಂದಿನ ವರ್ಷ ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ವಿವಿಧ ಏತ ನೀರಾವರಿ ಯೋಜನೆಗಳಿಗೆ 5 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಸಿಎಂ ಘೋಷಿಸಿದ್ದರು. ಇದರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯೂ ಒಂದಾಗಿತ್ತು. ಆದರೆ, ಈ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದು ಗೊತ್ತಾಗಲಿಲ್ಲ. ಕೋವಿಡ್ ವ್ಯಾಪಿಸಿದ್ದರಿಂದ ಅನುದಾನ ಬಿಡುಗಡೆಯಾಗಲಿಲ್ಲ. ಇದರಿಂದ ಯೋಜನೆಯ ನಿರಾಶ್ರಿತರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.

ನೂತನ ತಾಲೂಕು ಕಚೇರಿಗೆ ಮೂಲಸೌಕರ್ಯ ಒದಗಿಸಿ: ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಎಂದು ಘೋಷಣೆಯಾಗಿದೆಯೇ ಹೊರತು ಪ್ರಾಧಿಕಾರ ಕೆಲಸ ಕಾರ್ಯಗಳು ಈವರೆಗೂ ನಡೆದಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿದ್ದು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು. ಲಕ್ಷೆ್ಮೕಶ್ವರ, ಗಜೇಂದ್ರಗಡ ನೂತನ ತಾಲೂಕುಗಳಿಗೆ ಮೂಲಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡಬೇಕು. ತಾಲೂಕು ಕೇಂದ್ರಗಳಿಗೆ ಅಗತ್ಯವಿರುವ ಕಚೇರಿಗಳ ಸ್ವಂತ ಕಟ್ಟಡ ಸೇರಿ ಇತರ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ, ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ಕಟ್ಟಡಕ್ಕೆ ಅನುದಾನ ಘೋಷಣೆ, ಜಿಂಕೆ ವನ ನಿರ್ವಣ, 140 ಕೋಟಿ ರೂಪಾಯಿ ವೆಚ್ಚದ ಸಾಸಲವಾಡ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆಗೊಳಿಸಬೇಕು ಎಂದು ಜಿಲ್ಲೆಯ ಜನರು ಒತ್ತಾಯಿಸುತ್ತಿದ್ದಾರೆ.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪ್ರಸ್ತಾವನೆ: ಇತ್ತೀಚೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರಾಜ್ಯ ಮುಂಗಡಪತ್ರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಜಿಲ್ಲೆಗೆ 10 ಕೋಟಿ ರೂ. ನೀಡಬೇಕು. ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವರ್ತಕರು ಮತ್ತು ದಲಾಲರಿಗೆ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯಲ್ಲಿ್ಲ ಪ್ರತ್ಯೇಕ ಪ್ರಾತಿನಿಧ್ಯ ಕಲ್ಪಿಸಬೇಕು. ಉದ್ಯಮಿಗಳ ಅಭಿವೃದ್ಧಿಗಾಗಿ ಕೌಶಲ ಕೇಂದ್ರ ಸ್ಥಾಪಿಸಬೇಕು. ಕೃಷಿ ಆಧಾರಿತ ಉತ್ಪನ್ನಗಳ ಫುಡ್ ಪಾರ್ಕ್ ಸ್ಥಾಪಿಸಬೇಕು. ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಕೆಐಎಡಿಬಿಯಿಂದ ಕಡಿಮೆ ದರದಲ್ಲಿ ನಿವೇಶನ ನೀಡಬೇಕು. ಜಿಲ್ಲೆಯ ಲಕ್ಷೆ್ಮೕಶ್ವರ ಹಾಗೂ ಗಜೇಂದ್ರಗಡ ತಾಲೂಕು ರಚನೆಯಾಗಿದ್ದು, ಈ ಎರಡು ತಾಲೂಕುಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

500 ಕೋಟಿ ಅನುದಾನ" ಕೇಂದ್ರ ಸರ್ಕಾರವು ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಿದ ನಂತರ ನರಗುಂದ ಮತ್ತು ಗದಗ ನಗರದಲ್ಲಿ ಮಹದಾಯಿ ಮಹಾವೇದಿಕೆ ಸೇರಿ ವಿವಿಧ ರೈತ ಸಂಘಟನೆಗಳು ಯೋಜನೆ ಕಾಮಗಾರಿಗೆ 10 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ಶಾಸಕ ಎಚ್.ಕೆ. ಪಾಟೀಲರು ಮುಂಬರುವ ಬಜೆಟ್​ನಲ್ಲಿ 2 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದ್ದರು. ಜಿಲ್ಲೆಯ ಜನರ ಒತ್ತಡ ಹೆಚ್ಚಿದ್ದರಿಂದ ಕಳೆದ ವರ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ 500 ಕೋಟಿ ರೂಪಾಯಿ ಅನುದಾನ ಘೋಷಿಸಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರನ್ನು ಸಮಾಧಾನಪಡಿಸಿದ್ದರು.

ಇತ್ತೀಚೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ರಾಜ್ಯ ಮುಂಗಡಪತ್ರದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಲಾಗಿದೆ. |ಆನಂದ ಪೋತ್ನಿಸ್ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ
ಗದಗ ಜಿಲ್ಲೆಯಲ್ಲಿ ಅಪಾರ ಸಂಪನ್ಮೂಲವಿದ್ದು, ಇದಕ್ಕೆ ಪೂರಕವಾಗಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಮುಖ್ಯಮಂತ್ರಿ ಅವರು ಜಿಲ್ಲೆಗೆ ವಿಶೇಷ ಕೊಡುಗೆ ನೀಡಬೇಕು. ಅಲ್ಲದೆ, ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಕಡಿಮೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ. | ವಿಜಯಕುಮಾರ ಗಡ್ಡಿ ಉದ್ಯಮಿ, ಗದಗ