ಬೀರೂರಿನ ಮುದ್ದಾಪುರದ ಎರೆ ಬಯಲಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 
ನ್ಯೂಸ್

ಮಳೆಗಾಗಿ ಪ್ರಾರ್ಥಿಸಿ ಮೈಲಾರಲಿಂಗಸ್ವಾಮಿಗೆ ಪೂಜೆ

ಬೀರೂರು: ಬೀರೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೂಲ ಮೂರ್ತಿಗೆ ಪೂಜೆ ಸಲ್ಲಿಸಿ ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಗೊರವಯ್ಯನವರ ಡಮರುಗದ ಸದ್ದಿನಲ್ಲಿ ಏಳುಕೋಟಿ ಏಳುಕೋಟಿ ಏಳುಕೋಟಿ ಗ್ಯೋ ಚಾಂಗಮಲೋ ಎನ್ನುವ ಜಯಘೋಷಗಳೊಂದಿಗೆ ವಾದ್ಯ ಮೇಳದೊಡನೆ ಮೆರವಣಿಗೆ ಮೂಲಕ ಮುದ್ದಾಪುರ ಎರೆ ಬಯಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಚಪ್ಪರ ಸ್ಥಾಪಿಸಿ ಸ್ವಾಮಿಯನ್ನು ಕುಳ್ಳಿರಿಸಿ ನೂರೊಂದು ಗಣ ಪೂಜೆ, ದೋಣಿ ಸೇವೆ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸಿ ಅಪ್ಪಣೆ ಕೇಳಲಾಯಿತು. ಕಾಕತಾಳೀಯ ಎಂಬಂತೆ ಸ್ವಲ್ಪ ಸಮಯದಲ್ಲೇ ಪಟ್ಟಣದಾದ್ಯಂತ ಮಳೆ ವಾತಾವರಣ ಸೃಷ್ಟಿಯಾಗಿ ಹತ್ತಾರು ನಿಮಿಷಗಳ ಕಾಲ ಮಳೆಯೂ ಸುರಿಯಿತು.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಸ್ವಾಮಿಯನ್ನು ಎರೆಬಯಲಿಗೆ ಕರೆದೊಯ್ದು ಪೂಜೆ ಸಲ್ಲಿಸಿ ಮಳೆ ಬಗ್ಗೆ ಕುರುಹು ಕೇಳುವ ಪದ್ಧತಿ ನಡೆದು ಬಂದಿದೆ. ರೈತಾಪಿ ಜನರ ಕ್ಷೇಮಕ್ಕಾಗಿಯೂ ಇಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಈ ಬಾರಿ ಬೆಳೆ ಕೈಗೆ ಬರುವ ಸಮಯದಲ್ಲೇ ಮಳೆ ಕೈಕೊಟ್ಟಿದೆ. ಹೀಗಾಗಿ ರೈತರ ಕ್ಷೇಮಕ್ಕಾಗಿ ಪೂಜೆ ಸಲ್ಲಿಸಲಾಯಿತು ಎಂದು ಅರ್ಚಕ ದಶರಥ ತಿಳಿಸಿದರು.