ಮಳೆಗೆ ಪ್ರಾರ್ಥಿಸಿ ಹೆನ್ನಂಗಿ, ಬೆಳ್ಳಂಗಿ ಗ್ರಾಮಸ್ಥರು ಗಂಗೆಗಿರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದರು. 
ನ್ಯೂಸ್

ಮಳೆಗಾಗಿ ಗಂಗೆ ಗಿರಿಯಲ್ಲಿ ಪೂಜೆ

ಎನ್.ಆರ್.ಪುರ: ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಅಳೇಹಳ್ಳಿ ಗ್ರಾಮದ ಹೆನ್ನಂಗಿ, ಬೆಳ್ಳಂಗಿಯ 50ರಿಂದ 60 ಗ್ರಾಮಸ್ಥರು ಶುಕ್ರವಾರ ಚಿಕ್ಕಮಗಳೂರಿನ ಗಂಗೆಗಿರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರು ತಾಲೂಕು ಪರದೇಶಪ್ಪನ ಮಠದ ಧರ್ಮಾಧಿಕಾರಿ ಮಧುಕುಮಾರ್ ನೇತೃತ್ವದಲ್ಲಿ ಎನ್.ಆರ್.ಪುರ ತಾಲೂಕಿನ ಹೆನ್ನಂಗಿ, ಬೆಳ್ಳಂಗಿ ಗ್ರಾಮಸ್ಥರು ಗಂಗೆಗಿರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಗಿರಿಯಲ್ಲಿರುವ ಜಲವನ್ನು ಎನ್.ಆರ್.ಪುರ ತಾಲೂಕಿನ ಹೆನ್ನಂಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನಕ್ಕೆ ಕಲಶದಲ್ಲಿ ತಂದು ಪ್ರತಿಷ್ಠಾಪಿಸಿದ್ದಾರೆ. 9 ದಿನ ಗಂಗೆ ತುಂಬಿದ ಕಲಶಕ್ಕೆ ಶ್ರದ್ಧಾಭಕ್ತಿಯಿಂದ 5 ಜನರು ಪೂಜೆ ಸಲ್ಲಿಸಬೇಕು. ಇದರಿಂದ ಮಳೆ ಬರಲಿದೆ ಎಂಬ ಪ್ರತೀತಿ ಇದೆ.
37 ವರ್ಷಗಳ ಹಿಂದೆ ಮಳೆ ಕಡಿಮೆಯಾಗಿ ಬರಗಾಲ ಬಂದಾಗ ಇಲ್ಲಿನ ಹೆನ್ನಂಗಿ, ಬೆಳ್ಳಂಗಿ ಗ್ರಾಮಸ್ಥರು ಗಂಗೆಗಿರಿ ಬೆಟ್ಟಕ್ಕೆ ಹೋಗಿ ಜಲ ತಂದು ಪ್ರತಿಷ್ಠಾಪನೆ ಮಾಡಿ 9 ದಿನ ಭಕ್ತಿಯಿಂದ ಪೂಜೆ ಸಲ್ಲಿಸಿದ್ದರು. ಗಂಗೆ ತುಂಬಿರುವ ಕಲಶಕ್ಕೆ 9 ದಿನ ಪೂಜೆ ಮಾಡಿದ ನಂತರ ವಿಶೇಷವಾಗಿ ಎಡೆ ಇಟ್ಟು ಪೂಜೆ ಸಲ್ಲಿಸಿ ನಂತರ ಗಂಗೆಯನ್ನು ಬಾವಿಗೆ ಹಾಕಲಾಗುತ್ತದೆ. ಬಳಿಕ ಮಳೆ ಸುರಿಯುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.