ನ್ಯೂಸ್

ಮಳೆ ಆರ್ಭಟಕ್ಕೆ ಉಕ್ಕಿ ಹರಿದ ಕೆರೆ,ಕಟ್ಟೆ : ಕೃಷಿ ಜಮೀನು ಜಲಾವೃತ ರೈತರಿಗೆ ಸಂಕಷ್ಟ

ಹಾಸನ : ಅರಕಲಗೂಡು ತಾಲೂಕಿನಲ್ಲಿ ಶನಿವಾರ ರಾತ್ರಿ ಮಳೆ ಆರ್ಭಟಕ್ಕೆ ಹಲವಾರು ನಾಲೆಗಳು, ಕೆರೆ, ಕಟ್ಟೆಗಳು ತುಂಬಿ ಹರಿದು ಕೃಷಿ ಜಮೀನು ಜಲಾವೃತವಾಗಿದೆ. ಸಾರ್ವಜನಿಕ ಆಸ್ತಿ, ಪಾಸ್ತಿಗೆ ಹಾನಿಯಾಗಿದ್ದು, ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಮ್ಮಿ-ಮಲ್ಲಾಪುರ ಕೆರೆ ಮತ್ತೊಮ್ಮೆ ಉಕ್ಕಿ ಹರಿದು, ರಸ್ತೆ ಕೊಚ್ಚಿ ಹೋಗಿದೆ. ಕೃಷಿ ಜಮೀನು ಜಲಾವೃತವಾಗಿದೆ. ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ಒಂದು ಬದಿಗೆ ವಾಲಿವೆ.


ಮಲ್ಲಾಪುರ ಮೇಲ್ಭಾಗದಿಂದ ಹಲವಾರು ಕೆರೆಗಳ ನೀರು ದುಮ್ಮಿ-ಮಲ್ಲಾಪುರ ಕೆರೆಗೆ ನುಗ್ಗುತ್ತಿದೆ. ಪರಿಣಾಮ ಸಂತೆಮರೂರು, ಇಲ್ಲಹಳ್ಳಿ, ದುಮ್ಮಿಕೊಪ್ಪಲು, ಜೋಡಿ ಗುಬ್ಬಿ ಮಾರ್ಗದ ರಸ್ತೆ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೆರೆ ಕೋಡಿ ಬಿದ್ದು ಗುಬ್ಬಿ ಮಾರ್ಗದ ರಸ್ತೆ ಅರ್ಧ ಭಾಗ ತುಂಡಾಗಿತ್ತು. ಅಧಿಕಾರಿಗಳು ನೆಪಮಾತ್ರಕ್ಕೆ ತಡೆಗೋಡೆ ಹಾಕಿದ್ದರು. ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಮಾಜಿ ಶಾಸಕ ಎ.ಮಂಜು ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ರಸ್ತೆ ಸರಿಪಡಿಸಲು ಆಗಲಿಲ್ಲ.


ಆದರೆ ಈಗ ಮತ್ತೊಮ್ಮೆ ಕೆರೆ ನೀರು ಉಕ್ಕಿ ರಸ್ತೆ ಮೇಲೆ ಹರಿದು ಅಚ್ಚುಕಟ್ಟು ಭಾಗದ ಕೃಷಿ ಭೂಮಿ ಮೇಲೆ ನುಗ್ಗುತ್ತಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಜನರು ತತ್ತರಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳ್ಳಂಗಿ, ಹೆಬ್ಬಾಲೆ, ಬೆಳವಾಡಿ, ಬರಗೂರು, ಮುತ್ತಿಗೆ ಸೇರಿದಂತೆ ಸಾಕಷ್ಟು ಭಾಗದಲ್ಲಿ ಕೆರೆಗಳು ತುಂಬಿ ಹರಿದು ಅಚ್ಚುಕಟ್ಟು ಭಾಗದ ಬೆಳೆ ಜಮೀನು ಜಲಾವೃತವಾಗಿದ್ದು, ಹಾನಿಗೀಡಾಗಿದೆ. ಮಳೆ ನೀರಿಗೆ ಕೆಲವು ಕಡೆ ರಸ್ತೆಗಳು ಕೊಚ್ಚಿ ಹೋಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ತಾಲೂಕಿನ ಕಂಚೇನಹಳ್ಳಿ, ಚಿಕ್ಕನಹಳ್ಳಿ, ಕೆರೆಕೋಡಿ ಸೇರಿದಂತೆ ಆರು ಮನೆಗಳ ಗೋಡೆ ಕುಸಿದು ಹಾನಿಗೀಡಾಗಿದೆ.


ಭಾರಿ ಮಳೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗಿ ಜನರು ಸಂಕಷ್ಟ ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.